×
Ad

ಕಾರ್ಮಿಕರ ಕೆಲಸ, ವೇತನ ಉಳಿಸಲು ಅಗತ್ಯ ಕ್ರಮಕ್ಕೆ ಸಿಪಿಎಂ ಆಗ್ರಹ

Update: 2020-04-16 22:20 IST

ಉಡುಪಿ, ಎ.16: ಕೋವಿಡ್ -19 ವಿಸ್ತರಿತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಾಗೂ ಹಲವು ಕಾರ್ಖಾನೆಗಳಲ್ಲಿ ಉತ್ಪಾದನೆ ಆರಂಭಕ್ಕೆ ಅನುಮತಿಯನ್ನು ನೀಡಿರುವ ಕಾರಣ ಎಲ್ಲ ಕಾರ್ಖಾನೆ, ಸಂಸ್ಥೆಗಳು ಹಿಂದೆ ಇದ್ದ ಕಾರ್ಮಿಕರ ಸೇವೆಯನ್ನು ಬಳಸಿ ಉತ್ಪಾದನೆ ಆರಂಭಿಸಬೇಕು ಹಾಗೂ ಸರಕಾರದ ಆದೇಶ ದಂತೆ ಎಲ್ಲಾ ಕಾರ್ಮಿಕರಿಗೂ ಲಾಕ್‌ಡೌನ್ ಅವಧಿಯ ಪೂರ್ಣ ವೇತನ ನೀಡಬೇಕೆಂದು ಉಡುಪಿ ಜಿಲ್ಲಾ ಸಿಪಿಐಎಂ ಆಗ್ರಹಿಸಿದೆ.

ಕಾರ್ಮಿಕರ ವೇತನ ಹಾಗೂ ಉದ್ಯೋಗ ಉಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸಿಪಿಎಂ ಜಿಲ್ಲಾ ಸಮಿತಿಯು ರಾಜ್ಯ ಸರಕಾರ ಮತ್ತು ಕಾರ್ಮಿಕ ಇಲಾಖೆಯನ್ನು ಆಗ್ರಹಿಸಿದೆ.

ಮಾ.23ರಂದು ರಾಜ್ಯ ಸರಕಾರವು ಹೊರಡಿಸಿದ್ದ ಆದೇಶದಂತೆ ಮಾ.30 ರವರೆಗೆ ವೇತನ ಪಾವತಿಸಲು ಮತ್ತು ಲಾಕ್‌ಡೌನ್ ಕಾರಣ ಕೆಲಸಕ್ಕೆ ಹಾಜರಾಗದಿದ್ದರೆ ಕೆಲಸದಿಂದ ತೆಗೆಯ ಬಾರದು ಎಂದು ಹೇಳಿದೆ. ಅದನ್ನೂ ಹಲವು ಕಂಪನಿಗಳು ಪಾಲಿಸದಿರುವ, ಮಾರ್ಚ್ ತಿಂಗಳ ಸಂಬಳದಲ್ಲಿ ಕಡಿತ ಮಾಡಿರುವ ಅಥವಾ ಈವರೆಗೆ ನೀಡದಿರುವ ಹಲವು ಪ್ರಕರಣಗಳಿವೆ. ಇದೀಗ ಏಪ್ರಿಲ್ ತಿಂಗಳ ಸಂಬಳ ನೀಡದಿರಲು ಹಲವು ದಾರಿಗಳನ್ನು ಕಂಪನಿಗಳು/ ಮಾಲಕರು ಹುಡುಕುತ್ತಿದ್ದಾರೆ ಎಂದು ಸಿಪಿಎಂ ದೂರಿದೆ.

ಈ ಕಾರಣಗಳಿಂದಾಗಿ ರಾಜ್ಯ ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಲಾಕ್‌ಡೌನ್ ಕಾಲಾವಧಿಯ ವೇತನ ಉದ್ಯೋಗ ಸಂರಕ್ಷಣೆಗೆ ಎ.13ರಂದು ಹೊರಡಿಸಿದ್ದ ಆದೇಶವನ್ನು ಎ.15 ರಂದು ಹಿಂಪಡೆದಿದ್ದಾರೆ. ರಾಜ್ಯ ಸರಕಾರವು ಮಾಲಕರ ಲಾಭಿಗೆ ಮಣಿದು ಆದೇಶ ಹಿಂಪಡೆದಿರುವುದನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News