×
Ad

ರಕ್ತದಾನಿಗಳ ಮೇಲೆ ಹಲ್ಲೆ ಆರೋಪ: ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಮುನೀರ್ ಕಾಟಿಪಳ್ಳ ಆಗ್ರಹ

Update: 2020-04-16 22:49 IST

ಮಂಗಳೂರು, ಎ.16: ನಗರದ ನಂತೂರಿನಲ್ಲಿ ರಕ್ತದಾನಿಗಳ ಮೇಲೆ ಹಲ್ಲೆಗೈದ ಪೊಲೀಸ್ ಅಧಿಕಾರಿ ಸಿದ್ದೇಗೌಡರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ರಕ್ತದ ತೀವ್ರ ಅಭಾವ ಉಂಟಾದ ಹಿನ್ನೆಲೆಯಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ ಜಿಲ್ಲಾ ಸಮಿತಿಯು ಹರಸಾಹಸ ಪಟ್ಟು ದಾನಿಗಳನ್ನು ವಾಹನಗಳಲ್ಲಿ ಕರೆತಂದು ರಕ್ತ ಸಂಗ್ರಹ ಮಾಡುತ್ತಿದೆ. ಅದರಂತೆ ಗುರುವಾರ ಪಂಜಿಮೊಗರು ಪ್ರದೇಶದ 6 ಮಂದಿ ದಾನಿಗಳನ್ನು ಸಂಯೋಜಕ ಪ್ರವೀಣ್ ರೆಡ್‌ಕ್ರಾಸ್‌ನ ಅಧಿಕೃತ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ನಂತೂರು ಜಂಕ್ಷನ್‌ನಲ್ಲಿ ತಡೆದ ಪೊಲೀಸ್ ಅಧಿಕಾರಿ ಸಿದ್ದೇಗೌಡ ವಾಹನದಲ್ಲಿದ್ದ ರಕ್ತದಾನಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ರೆಡ್‌ಕ್ರಾಸ್ ಸೊಸೈಟಿಯ ಬಗ್ಗೆ ಅವಹೇಳನಕಾರಿಯಾಗಿ ‘ನೀವು ರಕ್ತದ ವ್ಯಾಪಾರ ಮಾಡುವವರು, ನೀವು ರಕ್ತ ಮಾರಿ ಹಣ ಮಾಡಲು ಹೋಗುತ್ತಿದ್ದೀರಿ’ ಎಂದು ಹೀಯಾಳಿಸಿದ್ದಾರೆ. ರಕ್ತದಾನಿ ವಿದ್ಯಾರ್ಥಿ ರಾಘವೇಂದ್ರನ ಕೂದಲು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳನ್ನು ಬಳಸಿ ದರ್ಪ ಮೆರೆದಿದ್ದಾರೆ.

ಸರಕಾರದ ಅಧೀನದ ಸಂಸ್ಥೆಯಾದ ಮಾನವೀಯ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯನ್ನು ಅವಮಾನಿಸಿರುವುದು, ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಹೊರಟವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಅಧಿಕಾರವನ್ನು ದುರುದ್ದೇಶಪೂರ್ವಕವಾಗಿ ಬಳಸಿ ಅನ್ಯಾಯವೆಸಗಿರುವ ಸಿದ್ದೇಗೌಡರ ಮೇಲೆ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News