×
Ad

ಉಡುಪಿ: ತರಕಾರಿ ಮಾರ್ಕೆಟ್ ಬೀಡಿನಗುಡ್ಡೆಗೆ ಸ್ಥಳಾಂತರ

Update: 2020-04-16 23:13 IST

ಉಡುಪಿ, ಎ.16: ನಗರದ ಕೇಂದ್ರ ಸ್ಥಾನದಲ್ಲಿ ಸರಕಾರಿ ಬಸ್ ನಿಲ್ದಾಣದ ಎದುರಿಗೆ ಕಾರ್ಯಾಚರಿಸುತಿದ್ದ ತರಕಾರಿ ಮಾರ್ಕೆಟ್‌ನ್ನು ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ನಗರದಿಂದ ಹೊರಗೆ ಬೀಡಿನಗುಡ್ಡೆ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ದೇಶಾದ್ಯಂತ ಕೊರೋನ ಅಟ್ಟಹಾಸ ಮುಂದುವರಿದಿರುವಂತೆ ಲಾಕ್‌ಡೌನ್ 2.0 ಹೇರಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಹಾಗೂ ನಗರಸಭಾ ಆಡಳಿತ ಮುಂದಾಗಿದ್ದು, ಮೊದಲ ಕ್ರಮವಾಗಿ ವಿಶ್ವೇಶ್ವರಯ್ಯ ಕಟ್ಟಡದ ಆವರಣದಲ್ಲಿ ಇಕ್ಕಟ್ಟಾದ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ.

ಉಡುಪಿಯ ಜನರು ತರಕಾರಿ ಖರೀದಿಗೆ ಈ ಮಾರುಕಟ್ಟೆಗೆ ಬರುತಿದ್ದು, ಇಲ್ಲಿ ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಗರಸಭೆಗೆ ದೊಡ್ಡ ತಲೆನೋವಾಗಿತ್ತು. ಹೀಗಾಗಿ ಇಂದು ಈ ಮಾರ್ಕೆಟ್‌ನ್ನು ನಗರದ ಹೊರ ವಲಯಕ್ಕೆ ಸ್ಥಳಾಂತರಿಸಲಾಯಿತು.

ಬೀಡಿನಗುಡ್ಡೆಯಲ್ಲಿರುವ ಮಹಾತ್ಮ ಗಾಂಧಿ ಮೈದಾನದಲ್ಲಿ ಇನ್ನು ಮುಂದೆ ತರಕಾರಿ ವಿಲೇವಾರಿ ಮಾಡಲಾಗುವುದು. ಹೊರ ಜಿಲ್ಲೆಯಿಂದ ಬರುವ ತರಕಾರಿ ವಿಲೇವಾರಿಗಾಗಿ ಹೊಸ ಸ್ಥಳ ನಿಗದಿ ಪಡಿಸಲಾಗಿದೆ.

ಇಲ್ಲಿ ವಲಸೆ ಕಾರ್ಮಿಕ ಮಹಿಳೆಯರಿಗೆ ಉಚಿತ ತರಕಾರಿ ಹಂಚಿಕೆ ಮಾಡುವ ಸುದ್ದಿ ತಿಳಿದ ಮಹಿಳೆಯರು ತರಕಾರಿ ತೆಗೆದುಕೊಳ್ಳಲು ಮುಗಿಬಿದ್ದರು. ಈ ವೇಳೆ ಇವರು ಸಾಮಾಜಿಕ ಅಂತರ ಗಾಳಿಗೆ ತೂರಿದರು. ಕೊನೆಗೆ ಪೊಲೀಸರು ಬಂದು ಪರಿಸ್ಥಿತಿಯನ್ನು ನಿಯಂತ್ರಿಸಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News