ಅನಿವಾಸಿ ಕನ್ನಡಿಗರ ನೆರವಿಗೆ ಮುಸ್ಲಿಂ ಒಕ್ಕ್ಕೂಟ ಮನವಿ
ಮಂಗಳೂರು, ಎ.16: ಮಧ್ಯಪ್ರಾಚ್ಯ ದೇಶಗಳಲ್ಲಿ ದುಡಿಯುತ್ತಿರುವ ಅನಿವಾಸಿ ಕನ್ನಡಿಗರನ್ನು ತವರೂರಿಗೆ ಕರೆಸಿಕೊಳ್ಳಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರಿಗೆ ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಮನವಿ ಮಾಡಿದ್ದಾರೆ.
ಕೊರೋನ ಸೋಂಕಿನಿಂದ ಜಗತ್ತು ತತ್ತರಿಸಿದೆ. ಹೆಚ್ಚಿನ ದೇಶಗಳು ವಿವಿಧ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಿದೆ. ಇದರಿಂದ ಗಲ್ಫ್‌ನಲ್ಲಿ ದುಡಿಯುವ ಅನಿವಾಸಿ ಕನ್ನಡಿಗರು ಕೂಡ ಸಮಸ್ಯೆಗೆ ಸಿಲುಕಿದ್ದಾರೆ. ಅತ್ತ ಸರಿಯಾಗಿ ಉದ್ಯೋಗವೂ ಇಲ್ಲದೆ ಇತ್ತ ಊರಿಗೂ ಬರಲಾಗದೆ ಪರಿತಪಿಸುತ್ತಿದ್ದಾರೆ. ರಾಜ್ಯದ ಅದರಲ್ಲೂ ಕರಾವಳಿ ಜಿಲ್ಲೆಯ ಆರ್ಥಿಕ,ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಅನಿವಾಸಿ ಕನ್ನಡಿಗರು ಊರಿಗೆ ಬರಲು ಉತ್ಸುಕರಾಗಿದ್ದರೂ ಕೂಡ ವಿಮಾನಯಾನದ ವ್ಯವಸ್ಥೆ ಇಲ್ಲದ ಕಾರಣ ತೊಂದರೆಗೆ ಈಡಾಗಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಅನಿವಾಸಿ ಕನ್ನಡಿಗರನ್ನು ಊರಿಗೆ ತಲುಪಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದ್ದಾರೆ.