ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆಯಲ್ಲಿ ಹಾವುಗಳ ಕಾಟ: ವ್ಯಾಪಾರಿಗಳಿಗೆ ಸಂಕಷ್ಟ
ಮಂಗಳೂರು, ಎ.17: ನಗರದ ಸೆಂಟ್ರಲ್ ಮಾರ್ಕೆಟ್‌ನಿಂದ ಬೈಕಂಪಾಡಿ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಂಡ ಮಾರುಕಟ್ಟೆಯಲ್ಲಿ ಹಾವುಗಳ ಕಾಟ ಶುರುವಾಗಿದೆ. ಶುಕ್ರವಾರ ಮುಂಜಾನೆ ಹೆಬ್ಬಾವುವೊಂದು ಕಾಣಿಸಿಕೊಂಡಿದ್ದು, ಒಲ್ಲದ ಮನಸ್ಸಿನಿಂದ ಬೈಕಂಪಾಡಿಗೆ ಸ್ಥಳಾಂತರಗೊಂಡ ವ್ಯಾಪಾರಿಗಳು ಇದರಿಂದ ಆತಂಕರಾಗಿದ್ದಾರೆ.
"ವಾರ್ತಾಭಾರತಿ"ಯ ಓದುಗರೊಬ್ಬರು ವೀಡಿಯೊವೊಂದನ್ನು ಕಳಿಸಿ ನಾವು ಇಲ್ಲಿಗೆ ಬಂದು ವ್ಯಾಪಾರ ಮಾಡಲು ತೊಡಗಿದ ದಿನದಿಂದಲೇ ನಾನಾ ಜಾತಿಯ ಹಾವುಗಳ ಕಾಟ ಶುರುವಾಗಿದೆ. ಇದರಿಂದ ನಮಗೆ ನೆಮ್ಮದಿಯಿಂದ ವ್ಯಾಪಾರ ಮಾಡಲು ಸಾಧ್ಯವಿಲ್ಲವಾಗಿದೆ. ಮೊದಲೇ ಇಲ್ಲಿ ದೀಪದ ವ್ಯವಸ್ಥೆ ಇಲ್ಲ. ದಿನಾ ಮುಂಜಾನೆ 4 ಅಥವಾ 5 ಗಂಟೆಗೆ ಆಗಮಿಸುವ ನಮಗೆ ಒಂದಲ್ಲೊಂದು ಜಾತಿಯ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳನ್ನು ಹೊರ ಹಾಕುವುದು ಹರಸಾಹಸವಾಗಿದೆ. ವಿದ್ಯುತ್ ದೀಪದ ವ್ಯವಸ್ಥೆಯಿಲ್ಲದ ಕಾರಣ ನಮ್ಮ ಆತಂಕ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಬೈಕಂಪಾಡಿಯ ಮಾರುಕಟ್ಟೆಯು ವ್ಯಾಪಾರಿಗಳ ಪಾಲಿಗೆ ಸಮಸ್ಯೆಗಳ ಆಗರವಾಗಿದೆ.