ವುಹಾನ್ ನಲ್ಲಿ ಕೊರೋನದಿಂದ ಮೃತಪಟ್ಟವರ ಸಂಖ್ಯೆ ಚೀನಾ ಹೇಳಿದ್ದಕ್ಕಿಂತ 50 ಶೇ.ದಷ್ಟು ಹೆಚ್ಚಳ!

Update: 2020-04-17 11:26 GMT

ಬೀಜಿಂಗ್: ಕೊರೋನ ವೈರಸ್ ಸೋಂಕು ಮೊದಲು ಪತ್ತೆಯಾದ ವುಹಾನ್ ನಗರದಲ್ಲಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಚೀನಾ ತಿದ್ದುಪಡಿ ತಂದಿದ್ದು ಹಿಂದಿನ ಸಂಖ್ಯೆಗಿಂತ ಶೇ. 50ರಷ್ಟು ಹೆಚ್ಚು ಮಂದಿ  ಮೃತಪಟ್ಟಿದ್ದಾರೆಂದು ಶುಕ್ರವಾರ ಅಲ್ಲಿನ ಆಡಳಿತ ಹೇಳಿದೆ.

ಈ ಹಿಂದೆ ವುಹಾನ್‍ನಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 2,579 ಎಂದು ಹೇಳಲಾಗಿದ್ದರೆ ಈಗ ಆ ಸಂಖ್ಯೆ 3,869 ಆಗಿದೆ.

ವುಹಾನ್ ನಗರದಲ್ಲಿ ಕೊರೋನ ಸಾವುಗಳ ಸಂಖ್ಯೆಯ ನಿಖರತೆ ಕುರಿತಂತೆ ಸಾಕಷ್ಟು ಶಂಕೆಗಳಿರುವ ನಡುವೆಯೇ ಈಗ ಚೀನಾ  ಈ ಹಿಂದೆ ಘೋಷಿಸಿದ್ದಕ್ಕಿಂತ 1,290 ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ತಪ್ಪು ಅಂಕಿಸಂಖ್ಯೆಗಳು, ವಿಳಂಬಿತ ಮಾಹಿತಿ ಹಾಗೂ ಇತರ ಸಮಸ್ಯೆಗಳಿಂದ ನಿಖರ ಸಂಖ್ಯೆ ಈ ಹಿಂದೆ ನೀಡುವುದು ಸಾಧ್ಯವಾಗಿಲ್ಲ ಎಂದು ಸ್ಥಳೀಯಾಡಳಿತ ತಿಳಿಸಿದೆ. ವುಹಾನ್ ‍ನಲ್ಲಿ ಕೊರೋನದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಏರಿಕೆಯಾಗಿರುವುದರಿಂದ ಚೀನಾದಲ್ಲಿ ಈ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ ಈಗ 4,632 ಆಗಿದೆ.

ವುಹಾನ್ ನಲ್ಲಿ ಮೃತರ ಸಂಖ್ಯೆಯ ಬಗ್ಗೆ ಜಗತ್ತನ್ನು ಎಚ್ಚರಿಸಿದ್ದ ಮೂವರು 2 ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದ ಚೆನ್ ಕ್ವಿಷಿ, ಫಾಂಗ್ ಬಿಂಗ್ ಮತ್ತು ಲಿ ಝೆಹುವಾ ಫೆಬ್ರವರಿ ತಿಂಗಳಿನಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಚೀನಾದ ಅಧಿಕಾರಿಗಳು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News