×
Ad

​ಉಡುಪಿ: ಶುಕ್ರವಾರ ಜಿಲ್ಲೆಯಲ್ಲಿ ಒಟ್ಟು 225 ಸ್ಯಾಂಪಲ್‌ಗಳು ನೆಗೆಟಿವ್

Update: 2020-04-17 19:23 IST

ಉಡುಪಿ, ಎ.17: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪರೀಕ್ಷೆಗಾಗಿ ಗುರುವಾರದವರೆಗೆ ಕಳುಹಿಸಲಾದ ಒಟ್ಟು 409 ಗಂಟಲು ದ್ರವದ ಸ್ಯಾಂಪಲ್‌ಗಳಲ್ಲಿ ಇಂದು 225 ನೆಗೆಟಿವ್ ಆಗಿ ಬಂದಿವೆ. ಇನ್ನು ಶುಕ್ರವಾರ ಪರೀಕ್ಷೆಗೆ ಕಳುಹಿಸಿದ 18 ಸ್ಯಾಂಪಲ್‌ಗಳು ಸೇರಿದಂತೆ ಇನ್ನು ಒಟ್ಟು 202ರ ವರದಿ ಇನ್ನು ಬರಬೇಕಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಶುಕ್ರವಾರ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ 18 ಗಂಟಲು ದ್ರವ ಸ್ಯಾಂಪಲ್‌ಗಳಲ್ಲಿ ಒಂದು ಕೊರೋನ ಶಂಕಿತರ ಸಂಪರ್ಕಕ್ಕೆ ಬಂದವರದ್ದಾದರೆ, ಒಂದು ತೀವ್ರ ಉಸಿರಾಟದ ತೊಂದರೆ ಅನುಭವಿಸುವವರದ್ದು. ನಾಲ್ವರು ಶೀತಜ್ವರದ ಕಾರಣಕ್ಕಾಗಿ ಹಾಗೂ ಉಳಿದ 12 ಮಂದಿ ವಿವಿಧ ಕೊರೋನ ಹಾಟ್‌ಸ್ಪಾಟ್‌ನಿಂದ ಮರಳಿದವರು ಎಂದು ಅವರು ವಿವರಿಸಿದರು.

ಶುಕ್ರವಾರ ಒಟ್ಟು 13 ಮಂದಿ ಕೋವಿಡ್-19 ರೋಗಲಕ್ಷಣದೊಂದಿಗೆ ಹೊಸದಾಗಿ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಎಂಟು ಮಂದಿ ಪುರುಷರು ಹಾಗೂ ಐವರು ಮಹಿಳೆಯರು. ಇವರಲ್ಲಿ ಒಂಭತ್ತು ಮಂದಿ ತೀವ್ರ ಉಸಿರಾಟದ ತೊಂದರೆಗಾಗಿ ಬಂದಿದ್ದರೆ, ಮೂವರು ಶಂಕಿತ ಕೋವಿಡ್ ಸೋಂಕಿನ ಪರೀಕ್ಷೆಗೆ ಬಂದಿದ್ದಾರೆ. ಒಬ್ಬ ಮಾತ್ರ ಶೀತಜ್ವರ ಬಾಧೆಗೆ ದಾಖಲಾಗಿದ್ದಾರೆ. ಇಂದು ಎಂಟು ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, ಒಟ್ಟಾರೆಯಾಗಿ ಇವರ ಸಂಖ್ಯೆ 204 ಆಗಿದೆ ಎಂದು ಡಿಎಚ್‌ಓ ತಿಳಿಸಿದರು.

ಜಿಲ್ಲೆಯಿಂದ ಇದುವರೆಗೆ ಒಟ್ಟು 839 ಮಂದಿಯ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ ಈವರೆಗೆ 637 ಮಂದಿಯ ವರದಿ ಮಾತ್ರ ಬಂದಿವೆ. 603 ಸ್ಯಾಂಪಲ್ ನೆಗೆಟಿವ್ ಆಗಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿವೆ. ಪಾಸಿಟಿವ್ ಬಂದ ಮೂವರಲ್ಲಿ ಇಬ್ಬರು ಈಗಾಗಲೇ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಒಬ್ಬ ಯುವಕ ಇನ್ನೂ ಉಡುಪಿ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ಉಸಿರಾಟದ ತೊಂದರೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಬಂದವರು ಹಾಗೂ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು ಸೇರಿ ಶುಕ್ರವಾರ ಮತ್ತೆ 194 ಮಂದಿ ತಪಾಸಣೆಗಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2486 ಮಂದಿ ತಪಾಸಣೆ ಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 1646 (ಇಂದು 167) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 2061 (11) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ. ಒಟ್ಟು 335 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 34 ಮಂದಿ ಆಸ್ಪತ್ರೆ ಕ್ವಾರಂಟೈನ್ ‌ನಲ್ಲಿದ್ದಾರೆ. ಇಂದು ಏಳು ಮಂದಿ ಆಸ್ಪತ್ರೆ ಕ್ವಾರಂಟೈನ್‌ನಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News