ಕೋವಿಡ್-19 : ಉಡುಪಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾಧಿಕಾರಿಗಳ ಸಭೆ
ಉಡುಪಿ, ಎ.17: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಸಭೆ, ಮೈಸೂರು ವಿಭಾಗೀಯ ಕಚೇರಿಯ ಉಪನಿರ್ದೇಶಕ ಡಾ.ರಾಮಚಂದ್ರಪ್ಪ ಅವರ ಉಪಸ್ಥಿತಿಯಲ್ಲಿ ಇಂದು ಅಜ್ಜರಕಾಡಿನಲ್ಲಿರುವ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.
ಇದೇ ವೇಳೆ ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎ.1ರಿಂದ ಹೊರರಾಜ್ಯ ಹಾಗೂ ಹೊರಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಬಂದಿರುವ ವರಿಗೆ ಹೋಮ್ ಕ್ವಾರಂಟೈನ್‌ನಲ್ಲಿರಿಸುವ ಹಾಗೂ ಮೊಹರು ಹಾಕಿ ಮಾಹಿತಿ ಸಂಗ್ರಹಿಸುವ ಕುರಿತು ಆರೋಗ್ಯ ಕಾರ್ಯಕರ್ತೆಯರಿಗೆ ಮಾಹಿತಿ ಗಳನ್ನು ನೀಡಲಾಯಿತು.
ಕಾರ್ಕಳ ತಾಲೂಕಿನ ದುರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂವ ಗ್ರಾಪಂ ವತಿಯಿಂದ ಗ್ರಾಮದ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಸುಮಾರು 600 ಮಾಸ್ಕ್‌ಗಳನ್ನು ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗಣೇಶೋತ್ಸವ ಸಮಿತಿ ದುರ್ಗ ಮತ್ತು ಜಲದುರ್ಗ ಸ್ಪೋರ್ಟ್ಸ್ ಕ್ಲಬ್ ತೆಳ್ಳಾರು ಇವರ ಸಹಕಾರದೊಂದಿಗೆ ಗ್ರಾಮಸ್ಥರಿಗೆ ವಿತರಿಸಲಾಯಿತು.
ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಕಳದ ಬೆಳ್ಮಣ್ಣು, ಇರ್ವತ್ತೂರು, ಕುಂದಾಪುರದ ಸಿದ್ಧಾಪುರ, ಉಡುಪಿ ತಾಲೂಕಿನ ಸಾಸ್ತಾನ, ಪೆರ್ಣಂಕಿಲ ಗ್ರಾಮಗಳ ಮನೆಮನೆಗೆ ಭೇಟಿ ನೀಡಿ ಕೋವಿಡ್-19ರ ಕುರಿತು ಕರಪತ್ರ ವಿತರಣೆ, ಮಾಹಿತಿ ಹಂಚಿಕೆ, ಸಾಮಾಜಿಕ ಅಂತರದ ಬಗ್ಗೆ ತಿಳುವಳಿಕೆ ನೀಡಿದರು.