‘ವಾರಿಯರ್ ಆಫ್ ದಿ ಡೇ’ ಆಗಿ ಶಿವಪ್ಪ ಆಯ್ಕೆ
Update: 2020-04-17 19:30 IST
ಮಂಗಳೂರು, ಎ.17: ಕೊರೋನ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಸಂದರ್ಭ ಉತ್ತಮವಾಗಿ ಕಾರ್ಯನಿರ್ವಹಿಸಿದ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರು ‘ದಿನದ ಕೊವಿಡ್ ವಾರಿಯರ್’ ಎಂದು ಗೌರವಿಸಲಿದ್ದಾರೆ. ಅದರಂತೆ ಶುಕ್ರವಾರದ ‘ವಾರಿಯರ್ ಆಫ್ ದಿ ಡೇ’ ಆಗಿ ಕಾವೂರು ಠಾಣೆಯ ಎಚ್‌ಸಿ ಶಿವಪ್ಪ ಆಯ್ಕೆಯಾಗಿದ್ದಾರೆ.
ಇವರು ಗುರುವಾರ ಅಪರಾಹ್ನ 3ಗಂಟೆಗೆ ಠಾಣೆಗೆ ಬಂದ ದೂರವಾಣಿ ಕರೆಯನ್ನು ಆಧರಿಸಿ ಸ್ಥಳಕ್ಕೆ ಹೋದಾಗ ಮೂಲತಃ ಬಾಗಲಕೋಟೆಯ ಪ್ರಸ್ತುತ ಶಾಂತಿನಗರ ನಿವಾಸಿ ಸುಧಾ ಎಂಬವರು ತುಂಬು ಗಭೀಣಿಯಾಗಿದ್ದು, ವಿಪರೀತ ಹೊಟ್ಟೆ ನೋವು ಬಂದ ಕಾರಣ ಆಸ್ಪತ್ರೆಗೆ ತೆರಳಲು ಯಾವುದೇ ವಾಹನಗಳು ಇಲ್ಲದೆ ಪರಿತಪಿಸುತ್ತಿದ್ದರು. ತಕ್ಷಣ ಶಿವಪ್ಪ ಅ್ಯಂಬ್ಯುಲೇನ್ಸ್ ವ್ಯವಸ್ಥೆ ಮಾಡಿ ಲೇಡಿಗೋಶನ್ ಆಸ್ಪತ್ರೆಗೆ ರವಾನಿಸಿ ಸಮಯ ಪ್ರಜ್ಙೆ ಮತ್ತು ಕರ್ತವ್ಯ ನಿಷ್ಠೆಯನ್ನು ತೋರಿ ಶ್ಲಾಘನೀಯ ಕೆಲಸವನ್ನು ಮಾಡಿರುತ್ತಾರೆ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.