ಕೊರೋನ ವೈರಸ್ ವುಹಾನ್‌ನ ಪ್ರಯೋಗಾಲಯದಲ್ಲಿ ಹುಟ್ಟಿಕೊಂಡಿತೇ?: ತನಿಖೆ ನಡೆಸಲು ಅಮೆರಿಕ ನಿರ್ಧಾರ

Update: 2020-04-17 14:31 GMT

ವಾಶಿಂಗ್ಟನ್, ಎ. 17: ನೋವೆಲ್-ಕೊರೋನ ವೈರಸ್‌ಗೆ ಸಂಬಂಧಿಸಿ ಚೀನಾ ಗುರುವಾರ ಅಮೆರಿಕ ನೇತೃತ್ವದ ಪಾಶ್ಚಾತ್ಯ ದೇಶಗಳ ಅಗಾಧ ಒತ್ತಡಕ್ಕೆ ಸಿಲುಕಿದೆ. ಜಗತ್ತಿನಾದ್ಯಂತ ಈವರೆಗೆ 21 ಲಕ್ಷ ಜನರಿಗೆ ಸೋಂಕು ಹಬ್ಬಿಸಿದ ವೈರಸ್ ಚೀನಾದ ವುಹಾನ್ ನಗರದ ಪ್ರಯೋಗಾಲಯದಲ್ಲಿ ಹುಟ್ಟಿಕೊಂಡಿತೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಮೆರಿಕ ಹೇಳಿದೆ.

ಈವರೆಗೆ ಜಗತ್ತಿನಾದ್ಯಂತ 1,40,000ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೊರೋನವೈರಸ್ ಎಲ್ಲೆಡೆ ಹಾಹಾಕಾರವನ್ನು ಸೃಷ್ಟಿಸುತ್ತಿರುವಂತೆಯೇ, ವೈರಸ್‌ನ ಹರಡುವಿಕೆಯಲ್ಲಿ ಚೀನಾದ ಪಾತ್ರ ಮುನ್ನೆಲೆಗೆ ಬಂದಿದೆ.

ಆರಂಭದಲ್ಲಿ ಸಾಂಕ್ರಾಮಿಕದ ಗಂಭೀರತೆಯನ್ನು ತಳ್ಳಿಹಾಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶದಲ್ಲಿ ಕಾಯಿಲೆಯು ನಿಯಂತ್ರಣಕ್ಕೆ ಸಿಗದೆ ದಾಪುಗಾಲಿಡಲು ಆರಂಭಿಸುತ್ತಿದ್ದಂತೆಯೇ ಚೀನಾದ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದ್ದಾರೆ. ಈ ವಿಷಯದಲ್ಲಿ ಅವರು ಅಭಿವೃದ್ಧಿ ಹೊಂದಿದ ಜಿ-7 ದೇಶಗಳ ನಾಯಕರೊಂದಿಗೆ ವೀಡಿಯೋಕಾನ್ಫರೆನ್ಸ್ ನಡೆಸಿದ್ದು, ಆ ದೇಶಗಳ ಬೆಂಬಲವನ್ನೂ ಪಡೆದುಕೊಂಡಿದ್ದಾರೆ.

ಎಲ್ಲ ವಿಷಯಗಳ ಬಗ್ಗೆ ತನಿಖೆ: ಪಾಂಪಿಯೊ

ವುಹಾನ್‌ನ ಪ್ರಯೋಗಾಲಯದ ಬಗ್ಗೆ ಚೀನಾ ಹೆಚ್ಚು ಪಾರದರ್ಶಕವಾಗಿರಬೇಕಾಗಿತ್ತು ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.

‘‘ಈ ವೈರಸ್ ಹೇಗೆ ಹೊರಬಂತು, ಜಗತ್ತಿಗೆ ಹೇಗೆ ಪಸರಿಸಿತು ಹಾಗೂ ಇಷ್ಟೊಂದು ಸಾವು-ಸಂಕಟವನ್ನು ಹೇಗೆ ಸೃಷ್ಟಿಸಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ತಿಳಿಯಲು ನಮ್ಮಿಂದ ಸಾಧ್ಯವಿರುವ ಎಲ್ಲ ವಿಷಯಗಳ ಬಗ್ಗೆಯೂ ನಾವು ಪೂರ್ಣ ಪ್ರಮಾಣದ ತನಿಖೆ ನಡೆಸುತ್ತೇವೆ’’ ಎಂದು ಪಾಂಪಿಯೊ ‘ಫಾಕ್ಸ್ ನ್ಯೂಸ್’ಗೆ ಹೇಳಿದರು.

ವೈರಸ್ ಪ್ರಯೋಗಾಲಯದಲ್ಲಿ ಹುಟ್ಟಿಲ್ಲವೆಂದು ಡಬ್ಲುಎಚ್‌ಒ ಹೇಳಿದೆ: ಚೀನಾ

ಚೀನಾದ ವುಹಾನ್ ನಗರದ ಪ್ರಯೋಗಾಲಯವೊಂದರಲ್ಲಿ ಕೊರೋನವೈರಸ್ ಹುಟ್ಟಿದೆ ಎನ್ನುವುದಕ್ಕೆ ಪುರಾವೆಯಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಹೇಳಿದೆ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಗುರುವಾರ ಹೇಳಿದ್ದಾರೆ.

ಚೀನಾದೊಂದಿಗೆ ಸಾಮಾನ್ಯ ಸಂಬಂಧ ಸಾಧ್ಯವಾಗದು: ಬ್ರಿಟನ್

 ಇನ್ನು ಚೀನಾದೊಂದಿಗೆ ‘ಸಾಮಾನ್ಯ ವ್ಯವಹಾರ’ ಸಾಧ್ಯವಾಗದು ಎಂದು ಬ್ರಿಟಿಶ್ ವಿದೇಶ ಕಾರ್ಯದರ್ಶಿ ಡೋಮಿನಿಕ್ ರಾಬ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

‘‘ವೈರಸ್ ಹೇಗೆ ಬಂತು ಹಾಗೂ ಅದನ್ನು ಆರಂಭದಲ್ಲೇ ತಡೆಯಲು ಯಾಕೆ ಸಾಧ್ಯವಾಗಲಿಲ್ಲ ಎಂಬ ಬಗ್ಗೆ ನಾವು ಕಠಿಣ ಪ್ರಶ್ನೆಗಳನ್ನು ಕೇಳಬೇಕಾಗಿದೆ’’ ಎಂದು ರಾಬ್ ಹೇಳಿದರು. ಅವರು ಕೋವಿಡ್-19 ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿರುವ ಪ್ರಧಾನಿ ಬೊರಿಸ್ ಜಾನ್ಸನ್ ಪರವಾಗಿ ದೇಶದ ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.

ನಮಗೆ ತಿಳಿಯದ ಎಷ್ಟೋ ಸಂಗತಿಗಳು ನಡೆದಿವೆ: ಮ್ಯಾಕ್ರೋನ್

ಕೊರೋನವೈರಸ್ ಸಾಂಕ್ರಾಮಿಕವನ್ನು ಚೀನಾ ಚೆನ್ನಾಗಿ ನಿಭಾಯಿಸಿದೆ ಎಂದು ನಂಬುವಷ್ಟು ಅಮಾಯಕರು ನಾವಾಗಬಾರದು ಎಂದು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಎಚ್ಚರಿಸಿದ್ದಾರೆ.

‘‘ಅಲ್ಲಿ ನಮಗೆ ತಿಳಿಯದ ಎಷ್ಟೋ ಸಂಗತಿಗಳು ನಡೆದಿವೆ’’ ಎಂದು ‘ಫೈನಾನ್ಶಿಯಲ್ ಟೈಮ್ಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.

ವೈರಸ್ ಪ್ರಯೋಗಾಲಯದಿಂದ ಹೊರಬಿತ್ತೇ?

 ವಾಸ್ತವವಾಗಿ ಕೊರೋನವೈರಸ್ ವುಹಾನ್‌ನಲ್ಲಿರುವ ಸೂಕ್ಷ್ಮ ಪ್ರಯೋಗಾಲಯದಿಂದ ತಪ್ಪಿಸಿಕೊಂಡು ಹೊರಬಂದಿದೆ ಎಂಬ ಸಂಶಯ ಹೆಚ್ಚುತ್ತಿದೆ ಎಂಬುದಾಗಿ ‘ವಾಶಿಂಗ್ಟನ್ ಪೋಸ್ಟ್’ ಮತ್ತು ‘ಫಾಕ್ಸ್ ನ್ಯೂಸ್’ ಮಾಧ್ಯಮಗಳು ವರದಿ ಮಾಡಿವೆ.

ಆ ಪ್ರಯೋಗಾಲಯವು ಬಾವಲಿಗಳ ಬಗ್ಗೆ ಅಧ್ಯಯನ ನಡೆಸಿದೆ. 2003ರಲ್ಲಿ ಸ್ಫೋಟಿಸಿದ ಸಾರ್ಸ್ ಕೊರೋನವೈರಸ್‌ಗೆ ಬಾವಲಿಗಳು ಕಾರಣ ಎಂದು ಹೇಳಲಾಗಿದೆ.

ಆದರೆ, ವೈರಸನ್ನು ಉದ್ದೇಶಪೂರ್ವಕವಾಗಿ ಹಬ್ಬಿಸಲಾಗಿದೆ ಎಂಬ ಇಂಗಿತವನ್ನು ಈ ಮಾಧ್ಯಮ ಸಂಸ್ಥೆಗಳು ವ್ಯಕ್ತಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News