ಕೋವಿಡ್-19 ಸ್ಯಾಂಪಲ್ ಟೆಸ್ಟಿಂಗ್‌ನಲ್ಲಿ ಉಡುಪಿ ನಂ.1
ಉಡುಪಿ, ಎ.17: ದೇಶಾದ್ಯಂತ ಮಿಂಚಿನ ವೇಗದಲ್ಲಿ ವ್ಯಾಪಿಸುತ್ತಿರುವ ನೋವೆಲ್ ಕೊರೋನ ವೈರಸ್ (ಕೋವಿಡ್-19)ನ ಪತ್ತೆಗಾಗಿ ಸ್ಯಾಂಪಲ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದೆ.
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಪ್ರತಿ ಒಂದು ಲಕ್ಷ ಜನರಲ್ಲಿ 34 ಮಂದಿಯ ಸ್ಯಾಂಪಲ್‌ಗಳ ಪರೀಕ್ಷೆ ನಡೆಯುತ್ತಿರುವುದು ಈ ಕುರಿತ ಅಂಕಿ ಅಂಶಗಳಿಂದ ಗೊತ್ತಾಗಿದ್ದು, ಇದು ಇಡೀ ರಾಜ್ಯದಲ್ಲೇ ಅತ್ಯುತ್ತಮ ಸಾಧನೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೋವಿಡ್-19 ಸ್ಯಾಂಪಲ್ ಟೆಸ್ಟ್‌ಗೆ ಸಂಬಂಧಿಸಿದಂತೆ ಇಂದು ಬಿಡುಗಡೆಗೊಂಡ ರಾಜ್ಯದ ಅಂಕಿಅಂಶಗಳಲ್ಲಿ ಈ ಮಾಹಿತಿ ಹೊರಬಿದ್ದಿದೆ. ಜಿಲ್ಲೆಯ ಒಟ್ಟು ಜನಸಂಖ್ಯೆ 11,77,361 ಆಗಿದ್ದರೆ, ಇವರಲ್ಲಿ ಇದುವರೆಗೆ 403 ಮಂದಿಯ ಕೊರೋನ ಸ್ಯಾಂಪಲ್ ಪರೀಕ್ಷೆ ನಡೆಸಲಾಗಿದೆ. ಇದು ಪ್ರತಿ ಲಕ್ಷ ಜನಸಂಖ್ಯೆಗೆ 34 ಆಗಿದೆ. ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ಎನಿಸಿಕೊಂಡಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಎರಡನೇ ಸ್ಥಾನ ಬಾಗಲಕೋಟೆ ಜಿಲ್ಲೆಗೆ ಲಭಿಸಿದೆ. 18,89,752 ಜನಸಂಖ್ಯೆಯ ಈ ಜಿಲ್ಲೆಯಲ್ಲಿ ಈವರೆಗೆ 625 ಮಂದಿಯ ಸ್ಯಾಂಪಲ್ ಟೆಸ್ಟ್ ನಡೆಸಿದ್ದು, ಇದು ಲಕ್ಷ ಜನಸಂಖ್ಯೆಗೆ ತಲಾ 33 ಆಗಿದೆ. ಅದೇ ರೀತಿ 979 ಸ್ಯಾಂಪಲ್‌ಗಳ ಪರೀಕ್ಷೆ ನಡೆಸಿರುವ ಮೈಸೂರು ಸಹ ಲಕ್ಷ ಜನರಲ್ಲಿ 33 ಮಂದಿಯ ಪರೀಕ್ಷೆ ನಡೆಸಿದೆ.
ಉಳಿದಂತೆ ಬೆಂಗಳೂರು ಗ್ರಾಮೀಣ (29), ಬೆಂಗಳೂರು (28), ದಕ್ಷಿಣ ಕನ್ನಡ (20,89,649 ಜನಸಂಖ್ಯೆ, 564 ಸ್ಯಾಂಪಲ್, ಲಕ್ಷಕ್ಕೆ 27 ಮಂದಿ), ಚಿಕ್ಕಬಳ್ಳಾಪುರ (26), ಕೋಲಾರ (24), ಧಾರವಾಡ (24), ಉತ್ತರ ಕನ್ನಡ (23) ನಂತರದ ಸ್ಥಾನಗಳಲ್ಲಿವೆ ಎಂದು ಇಲಾಖೆಯ ಮಾಹಿತಿಯಲ್ಲಿ ತಿಳಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಮೂವರಲ್ಲಿ ಮಾತ್ರ ಸೋಂಕು ಪತ್ತೆಯಾಗಿದ್ದು, ಇವರಲ್ಲಿ ಇಬ್ಬರು ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆ ಯಿಂದ ಬಿಡುಗಡೆಗೊಂಡಿದ್ದರೆ, ಒಬ್ಬರು ಈಗ ಚಿಕಿತ್ಸೆಯಲ್ಲಿದ್ದಾರೆ. ಮಾ.29ರ ನಂತರ ಜಿಲ್ಲೆಯಲ್ಲಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ.