ಕೊರೋನ ಸಂಬಂಧಿಸಿ ನಿಂದನೆ : ಬಂಟ್ವಾಳ ಠಾಣೆಯಲ್ಲಿ ಮತ್ತೆ ಇಬ್ಬರ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ, ಎ.17: ಕೊರೋನ ವೈರಸ್ ಹರಡುವಿಕೆಗೆ ಸಂಬಂಧಿಸಿ ಒಂದು ಸಮುದಾಯವನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿ ಪೋಸ್ಟ್ ಹಾಕಿರುವ ಇಬ್ಬರು ವ್ಯಕ್ತಿಗಳ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಶುಕ್ರವಾರ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಸಜಿಪ ಮೂಡ ಕೊಳಕೆ ಎಸ್ ಡಿಪಿಐ ಕಾರ್ಯಕರ್ತ ಅಬ್ದುಲ್ ರವೂಫ್ ಎಂಬವರು ನೀಡಿರುವ ದೂರಿನಂತೆ ಬೇಂಕೆ ಗುರುಮಂದಿರ ಸಮೀಪದ ನಿವಾಸಿ ಸತೀಶ್ ಪೂಜಾರಿ, ಪಾಣೆಮಂಗಳೂರು ಉಪ್ಪುಗುಡ್ಡೆಯ ಎಸ್ ಡಿಪಿಐ ಕಾರ್ಯಕರ್ತ ರಿಯಾಝ್ ಇಬ್ರಾಹೀಂ ಎಂಬವರು ನೀಡಿರುವ ದೂರಿನಂತೆ ಮೂಲತ ಮೆಲ್ಕಾರ್ ನಿವಾಸಿ ಡ್ಯಾನಿ ನಾಗರಾಜ ಮೋನಪ್ಪ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತದಲ್ಲಿ ಕೊರೋನ ವೈರಸ್ ಹರಡಲು ಮುಸ್ಲಿಮರು, ಮಸೀದಿ ಹಾಗೂ ಮುಸ್ಲಿಮ್ ಧರ್ಮ ಗುರುಗಳನ್ನು ಕಾರಣರು ಎಂದು ಈ ಇಬ್ಬರು ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದು ಒಂದು ಸಮುದಾಯ ಮತ್ತು ಆರಾಧನಾ ಕೇಂದ್ರಗಳನ್ನು ನಿಂದಿಸುವ ಮೂಲಕ ಸಮಾಜದಲ್ಲಿ ಕೋಮು ವೈಷಮ್ಯ ಹರಡಿ ಅಶಾಂತಿಯ ವಾತಾವರಣ ಸೃಷ್ಟಿಸಿ ಕೋಮು ಗಲಭೆ ನಡೆಸುವ ಹುನ್ನಾರವಾಗಿದ್ದು ಇಬ್ಬರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.