×
Ad

ಖಾಸಗಿ ಆಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಲು ಆರೋಗ್ಯಾಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

Update: 2020-04-17 21:39 IST

ಮಂಗಳೂರು, ಎ.17: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಸ್ಪತ್ರೆಯಾಗಿರುವ ವೆನ್ಲಾಕ್ ಪ್ರಸ್ತುತ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಾಗಿ ಮಾರ್ಪಟ್ಟಿರುವು ದರಿಂದ ಇತರ ತುರ್ತು ಚಿಕಿತ್ಸೆಗಳಿಗೆ ಸಂಬಂಧಿಸಿ ರೋಗಿಗಳಿಗೆ ಪೂರಕವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಲು ಆದೇಶಿಸಬೇಕು ನೀಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಲಾಕ್‌ಡೌನ್ ಹಾಗೂ ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ನಿರ್ವಹಿಸಲಾದ ಕಾರ್ಯ ಚಟುವಟಿಕೆಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಜಿಲ್ಲೆಯ ಶಾಸಕರನ್ನೊಳಗೊಂಡಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ವಿವಿಧ ಚಿಕಿತ್ಸೆಗಳಿಗೆ ಸಂಬಂಧಿಸಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಾಗೂ ಹೊಸತಾಗಿ ತುರ್ತು ಚಿಕಿತ್ಸೆಗಳಿಗೆ ದಾಖಲಾಗುವ ಬಯಸುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ತೊಂದರೆಯಾಗುತ್ತಿದೆ, ಹಣ ಪಡೆಯಲಾಗುತ್ತಿದೆ. ಬಡ ರೋಗಿಗಳಿಗೆ ಸೂಕ್ತ ಮಾಹಿತಿ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ ಎಂಬ ಜನಪ್ರತಿನಿಧಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಈಗಾಗಲೇ ಕೆಎಂಸಿ ಹಾಗೂ ವೆನ್ಲಾಕ್ ‌ನಲ್ಲಿ ಹೆಲ್ಪ್ ಡೆಸ್ಕ್ ಕಾರ್ಯಾಚರಿಸುತ್ತಿದೆ. ಉಳಿದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿಯೂ ಅದನ್ನು ಸಕ್ರಿಯಗೊಳಿಸಬೇಕು ಹಾಗೂ ಆರೋಗ್ಯ ಮಿತ್ರರಿಗೆ ಜವಾಬ್ದಾರಿಯನ್ನು ವಹಿಸುವಂತೆ ಸೂಚಿಸಲಾಯಿತು.

ದ.ಕ. ಜಿಲ್ಲೆಯಲ್ಲಿ ಕೊರೋನಗೆ ಸಂಬಂಧಿಸಿ ನಿನ್ನೆಯವರೆಗೆ 12 ಪಾಸಿಟಿವ್ ಪ್ರಕರಣಗಳಿದ್ದು, 9 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. ಅವರಿಗೆ 14 ದಿನಗಳ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಮೂರು ಮಂದಿಯ ಪ್ರಥಮ ಮಾದರಿ ಪರೀಕ್ಷೆ ವರದಿ ನೆಗೆಟಿವ್ ಬಂದಿದ್ದು, ಎರಡನೆ ಹಂತದ ವರದಿಗೆ ಕಾಯಲಾಗುತ್ತಿದೆ. ಉಳಿದಂತೆ ವಿವಿಧ ತಾಲೂಕುಗಳಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವವರನ್ನು ಸ್ಥಳೀಯ ಆರೋಗ್ಯ ಕಾರ್ಯಕರ್ತರು ಹಾಗೂ ಪೊಲೀಸರು ನಿಗಾ ವಹಿಸುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ ಮಾಹಿತಿ ನೀಡಿದರು.

ವೆನ್ಲಾಕ್ ‌ನ ನೂತನ ವೈರಾಲಜಿ ಲ್ಯಾಬ್‌ನಲ್ಲಿ ಬೆಳಗ್ಗೆ 8ರಿಂದ 4 ಗಂಟೆಯವರೆಗೆ ಹಾಗೂ ಸಂಜೆ 4ರಿಂದ 12 ಗಂಟೆಯವರೆಗೆ ಎರಡು ಅವಧಿ ಯಲ್ಲಿ ಕೊರೋನ ರೋಗ ಲಕ್ಷಣಗಳನ್ನು ಹೊಂದಿರುವ ಶಂಕಿತ ರೋಗಿಗಳ ಗಂಟಲಿನ ದ್ರವ ಮಾದರಿ ಪರೀಕ್ಷೆ ನಡೆಸಲಾಗುತ್ತದೆ. ದಿನಕ್ಕೆ 96 ಮಾದರಿ ಪರೀಕ್ಷೆಯನ್ನು ಈ ನೂತನ ಲ್ಯಾಬ್‌ನಲ್ಲಿ ಸದ್ಯ ಮಾಡಬಹುದಾಗಿದೆ. ಲ್ಯಾಬ್ ಆರಂಭವಾದ ಬಳಿಕ 835 ಮಾದರಿ ಪರೀಕ್ಷೆಗಳು ನಡೆದಿವೆ. ದ.ಕ. ಜಿಲ್ಲೆಯ ಜತೆಗೆ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯವರ ಗಂಟಲಿನ ದ್ರವ ಮಾದರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.

ಕೊರೋನ ರೋಗಿಗಳಿಗೆ ಚಿಕಿತ್ಸೆಗೆ ಸಂಬಂಧಿಸಿ ವೆನ್ಲಾಕ್ ‌ನಲ್ಲಿ 21 ಹಾಗೂ ಪೀಡಿಯಾಟ್ರಿಕ್ ವಿಭಾಗದಲ್ಲಿ 10 ಮತ್ತು ಇನ್‌ಫೋಸಿಸ್‌ನವರು ಕೊಡುಗೆಯಾಗಿ ನೀಡಿದ 2 ವೆಂಟಿಲೇಟರ್‌ಗಳು ಲಭ್ಯವಿದೆ ಎಂದು ಅವರು ಹೇಳಿದರು.

ಮನೆ ಸರ್ವೆ ಚುರುಕುಗೊಳಿಸಲು ನಿರ್ದೇಶನ

ಮಂಗಳೂರು ನಗರ ವ್ಯಾಪ್ತಿ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಆಶಾಕಾರ್ಯಕರ್ತರು, ಎಂಪಿಡಬ್ಲು ಹಾಗೂ ಎಎನ್‌ಎಂ ಕಾರ್ಯಕರ್ತರು ಮನೆ ಮನೆ ಭೇಟಿ ಮೂಲಕ ಕೋವಿಡ್ 19 ಸರ್ವೆ ಕಾರ್ಯವನ್ನು ಚುರುಕುಗೊಳಿಸಬೇಕು. ಮುಂದಿನ 10 ಜಿಲ್ಲೆಯ ಎಲ್ಲಾ ಮನೆಗಳ ಸರ್ವೆ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ನಿದೇಶಿಸಿದರು.

ಅಂತರ್‌ ರಾಜ್ಯ ಪಾಸು ನೀಡುವಂತಿಲ್ಲ: ಡಿಸಿ

ತಲಪಾಡಿ ಗಡಿ ಕುರಿತಂತೆ ಚರ್ಚೆಯ ವೇಳೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್, ಎ. 20ರಿಂದ ಲಾಕ್‌ಡೌನ್‌ನಲ್ಲಿ ಕೊಂಚ ಸಡಿಲಿಕೆ ಆದರೂ ಹೊರ ರಾಜ್ಯಗಳಿಂದ ಕಾರ್ಮಿಕರು ಸೇರಿದಂತೆ ಯಾರನ್ನೂ ಕರೆಸಿಕೊಳ್ಳಲು ಪಾಸ್ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಸದ್ಯ ತಲಪಾಡಿ ಗಡಿಯಲ್ಲಿ ಸುಪ್ರೀಂ ಕೋರ್ಟ್ ಸೂಚನೆ ಪ್ರಕಾರ ತುರ್ತು ಚಿಕಿತ್ಸೆಗೆ ಬರುವ ಚೆಕ್‌ಲಿಸ್ಟ್ ಹೊಂದಿರುವ ಆ್ಯಂಬುಲೆನ್ಸ್‌ಗಳ ಮೂಲಕವೇ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದರು.

ನಗರದ 8 ವಸತಿ ನಿಲಯಗಳಲ್ಲಿ 496 ಕಾರ್ಮಿಕರಿಗೆ ಆಶ್ರಯ

ಮಂಗಳೂರು ನಗರ ವ್ಯಾಪ್ತಿಯಲ್ಲಿ 8 ವಸತಿ ನಿಲಯಗಳಲ್ಲಿ 496 ವಲಸೆ ಕಾರ್ಮಿಕರಿಗೆ ಆಶ್ರಯ ಒದಗಿಸಲಾಗಿದೆ. ಈಗಾಗಲೇ ಕಾರ್ಮಿಕರಿಗೆ 15000 ಆಹಾರದ ಕಿಟ್‌ಗಳನ್ನು ಒದಗಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿ ಮಾಹಿತಿ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಹರೀಶ್ ಕುಮಾರ್, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ರಾಜೇಶ್ ನಾಯ್ಕಿ, ಹರೀಶ್ ಪೂಂಜ, ಮೇಯರ್ ದಿವಾಕರ್ ಪಾಂಡೇಶ್ವರ, ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ರೂಪಾ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್, ಡಿಸಿಪಿ ಅರುಣಾಂಶಗಿರಿ ಮೊದಲಾದವರು ಉಪಸ್ಥಿತರಿದ್ದರು.

ತರಕಾರಿ- ಹಣ್ಣು ವ್ಯಾಪಾರಕ್ಕೆ ಶೀಘ್ರ ತಾತ್ಕಾಲಿಕ ವ್ಯವಸ್ಥೆ: ಸಂಸದ ನಳಿನ್

ಸೆಂಟ್ರಲ್ ಮಾರುಕಟ್ಟೆಯ ತರಕಾರಿ ಹಾಗೂ ಹಣ್ಣುಹಂಪಲು ಸಗಟು ವ್ಯಾಪಾರ ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರವಾಗಿದೆ. ಆದರೆ ಅಲ್ಲಿ ಸೂಕ್ತ ವ್ಯವಸ್ಥೆ ಇಲ್ಲವೆಂಬ ಆರೋಪ ವ್ಯಾಪಾರಿಗಳದ್ದು. ಜತೆಗೆ ರಿಟೇಲ್ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳ ನಿಗದಿಪಡಿಸಲಾಗಿಲ್ಲ. ಸೆಂಟ್ರಲ್ ಮಾರುಕಟ್ಟೆಯಲ್ಲಿದ್ದ ಇತರ ರಿಟೇಲ್ ವ್ಯಾಪಾಸ್ಥರಿಗೂ ಯಾವುದೇ ಪರ್ಯಾಯ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್ ಹಾಗೂ ಯು.ಟಿ.ಖಾದರ್ ನಡುವೆ ಮಾತಿನ ಚಕಮಕಿ ಆರಂಭಗೊಂಡಿತು.
ಮಧ್ಯ ಪ್ರವೇಶಿಸಿ ಅವರಿಬ್ಬರನ್ನು ಸಮಾಧಾನ ಪಡಿಸಿದ ಸಂಸದ ನಳಿನ್ ಕುಮಾರ್, ಈ ಬಗ್ಗೆ ಈಗಾಗಲೇ ಚರ್ಚೆ ಆಗಿದೆ. ತರಕಾರಿ ಹಣ್ಣು ಸಗಟು ವ್ಯಾಪಾರ ಬೈಕಂಪಾಡಿಗೆ ಸ್ಥಳಾಂತರಗೊಂಡಿದ್ದು, ವ್ಯಾಪಾರಸ್ಥರಿಗೆ ಸ್ಥಳ ನಿಗದಿಪಡಿಸುವ ಕಾರ್ಯ ಎಪಿಎಂಸಿ ಒಂದೆರಡು ದಿನಗಳಲ್ಲಿ ಮಾಡಲಿದೆ. ಇದೇ ವೇಳೆ ಸೆಂಟ್ರಲ್ ಮಾರುಕಟ್ಟೆಯಲ್ಲಿದ್ದ ರಿಟೇಲ್ ವ್ಯಾಪಾರಸ್ಥಿರಿಗೆ ನಗರದ ನೆಹರೂ ಮೈದಾನದ ಬಳಿಯ ನಿಗದಿತ ಜಾಗದಲ್ಲಿ ಮೂರು ತಿಂಗಳ ಅವಧಿಯಲ್ಲಿ ತಾತ್ಕಾಲಿಕ ಕಟ್ಟಡ ನಿರ್ಮಾಣವಾಗಲಿದೆ. 15 ದಿನಗಳಲ್ಲಿ ತಾತ್ಕಾಲಿಕ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಉಳಿದಂತೆ ಸೆಂಟ್ರಲ್ ಮಾರುಕಟ್ಟೆ ಜಾಗದಲ್ಲಿ ಸ್ಮಾರ್ಟ್ ಮಾರುಕಟ್ಟೆ 3 ವರ್ಷಗಳಲ್ಲಿ ತಲೆ ಎತ್ತಲಿದೆ. ಕೊರೋನ ನಿಯಂತ್ರಣಗೊಂಡು ಲಾಕ್‌ಡೌನ್ ತೆರವುಗೊಂಡಾಗ ಸೆಂಟ್ರಲ್ ಮಾರುಕಟ್ಟೆಯಲ್ಲಿದ್ದ ಇತರ ರಿಟೇಲ್ ವ್ಯಾಪಾರಸ್ಥರಿಗೂ ನೆಹರೂ ಮೈದಾನದ ಬಳಿಯ ತಾತ್ಕಾಲಿಕ ಮಾರುಕಟ್ಟೆ ಕಟ್ಟಡದಲ್ಲಿ ವ್ಯವಸ್ಥೆ ಆಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News