ಗಾಲ್ ಟೂರ್ನಮೆಂಟ್‌ಗಳು ರದ್ದು: ನೂರಾರು ದಿನಗೂಲಿ ಕಾರ್ಮಿಕರಿಗೆ ಸಂಕಷ್ಟ

Update: 2020-04-18 07:06 GMT

ಹೊಸದಿಲ್ಲಿ, ಎ.17: ಕೊರೋನ ವೈರಸ್‌ನಿಂದಾಗಿ ಇಡೀ ದೇಶದಲ್ಲಿ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ವೃತ್ತಿಪರ ಗಾಲ್ಫ್ ಟೂರ್ ಆಫ್ ಇಂಡಿಯಾ(ಪಿಜಿಟಿಐ)ಎಲ್ಲ ಗಾಲ್ಫ್ ಟೂರ್ನಮೆಂಟ್‌ಗಳನ್ನು ರದ್ದುಪಡಿಸಿದೆ. ಹೀಗಾಗಿ ಗಾಲ್ಫ್ ಪಂದ್ಯದ ವೇಳೆ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ನೂರಾರು ಕುಟುಂಬಗಳ ಜೀವನ ನಿರ್ವಹಣೆ ತ್ರಾಸದಾಯಕವಾಗಿದೆ.

ವೇಗವಾಗಿ ಹರಡುತ್ತಿರುವ ಕೋವಿಡ್-19 ವೈರಸ್‌ನಿಂದಾಗಿ ಆರ್ಥಿಕ ಸ್ಥಿತಿ ಹದಗೆಡುತ್ತಿದ್ದು, ಇದು ಎಲ್ಲ ಕ್ರೀಡೆಗಳ ಮೇಲೆ ಗಾಢ ಪರಿಣಾಮವನ್ನು ಬೀರಿದೆ. ಗಾಲ್ಫ್ ಟೂರ್ನಿಗಳ ವೇಳೆ ಗಾಲ್ಫರ್‌ಗಳ ಪರಿಕರವನ್ನು ಹೊತ್ತೊಯ್ಯುವ ಕೆಲಸ ಮಾಡುವ ಕಾರ್ಮಿಕರಿಗೆ (ಕ್ಯಾಡಿಗಳು)ತೀವ್ರ ಸಂಕಷ್ಟ ಎದುರಾಗಿದೆ.

 ನ್ಯಾಶನಲ್ ಕ್ಯಾಪಿಟಲ್ ರೀಜನ್‌ನಲ್ಲಿ(ಎನ್‌ಆರ್‌ಆರ್)ಸುಮಾರು 2,500ರಿಂದ 3,000 ಕ್ಯಾಡಿಗಳಿದ್ದಾರೆ.ಹೆಚ್ಚಿನವರು ವಲಸಿಗರು. ಇವರುಗಳು ಖಾಯಂ ಕ್ಯಾಡಿಗಳಾಗಿದ್ದು, ಇತರ ನೂರಾರು ಜನರಿಗೆ ಅರೆಕಾಲಿಕ ಇಲ್ಲವೇ ಪರ್ಯಾಯ ಆದಾಯ ಗಳಿಕೆಯ ಮೂಲವಾಗಿದೆ.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ತುದಿಗಾಲಲ್ಲಿ ನಿಂತಿರುವ ಎರಡು ಬಾರಿಯ ಏಶ್ಯನ್ ಟೂರ್ ವಿನ್ನರ್ ರಶೀದ್ ಖಾನ್, ಪರಿಸ್ಥಿತಿ ಶೀಘ್ರವೇ ಸುಧಾರಿಸದೇ ಇದ್ದರೆ ಕ್ಯಾಡಿಗಳು ಹೆಚ್ಚು ಕಠಿಣ ಸಮಯ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

‘‘ಕ್ಯಾಡಿಗಳ ಮೇಲೆ ಲಾಕ್‌ಡೌನ್ ತೀವ್ರ ಪ್ರಭಾವಬೀರಿದೆ. ಇವರುಗಳು ಪ್ರತಿದಿನ ಹಣ ಗಳಿಸುತ್ತಾರೆ. ಇವರಿಗೆ ಬೇರೆ ಆದಾಯ ಮೂಲಗಳಿಲ್ಲ. ಇವರಿಗೆ ಕುಟುಂಬಗಳಿವೆ. ಬಾಡಿಗೆಯನ್ನು ಕಟ್ಟಬೇಕು. ಪರಿಸ್ಥಿತಿ ಸುಧಾರಿಸದೇ ಇದ್ದರೆ ಇವರ ಪರಿಸ್ಥಿತಿ ಕೆಟ್ಟದಾಗಲಿದೆ. ನನ್ನ ಕ್ಯಾಡಿ (ಇಮ್ರಾನ್ ಮುಹಮ್ಮದ್ ಅನ್ಸಾರಿ)ಮುಂಬೈನವನಾಗಿದ್ದು, ಹಣಕಾಸು ನೆರವು ನೀಡುವಂತೆ ಕೋರಿದ್ದಾನೆ’’ಎಂದು ರಶೀದ್ ಹೇಳಿದ್ದಾರೆ.

‘‘ನಮ್ಮ ದೇಶದಲ್ಲಿ ಕೇವಲ ಶೇ.5ರಷ್ಟು ಕ್ಯಾಡಿಗಳು ಸುಸ್ಥಿತಿಯಲ್ಲಿದ್ದಾರೆ. ಇವರುಗಳು ಪ್ರತಿ ತಿಂಗಳು 20ರಿಂದ 25 ಸಾವಿರ ರೂ.ಗಳಿಸುತ್ತಾರೆ. ತಮ್ಮ ಕುಟುಂಬವನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಆದರೆ,ಗಾಲ್ಫ್ ಕ್ಲಬ್‌ಗಳು ಬೇಗನೇ ತೆರೆಯದಿದ್ದರೆ ಉಳಿದವರು ಸಮಸ್ಯೆಗೆ ಸಿಲುಕುತ್ತಾರೆ. ಕೇವಲ 50-60 ಕ್ಯಾಡಿಗಳು ಪ್ರತಿದಿನ ಅಗ್ರ ಗಾಲ್ಫರ್‌ಗಳೊಂದಿಗೆ ತೆರಳುತ್ತಾರೆ. ಕೆಲವರಿಗೆ ಗಾಲ್ಫರ್‌ಗಳು ಸಂಬಳ ನೀಡುತ್ತಾರೆ. ಉಳಿದವರು ದಿನಗೂಲಿಯನ್ನು ನೆಚ್ಚಿಕೊಂಡಿದ್ದಾರೆ’’ಎಂದು ಕ್ಯಾಡಿ ಮಾಂಟು ಹೇಳಿದ್ದಾರೆ.

ಕಳೆದ 4 ವರ್ಷಗಳಿಂದ ರಶೀದ್ ಖಾನ್ ಸಹಾಯಕರಾಗಿ ಕೆಲಸ ಮಾಡುತ್ತಿರುವ ಮುಂಬೈ ಮೂಲದ ಇಮ್ರಾನ್, ತನ್ನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.

  ‘‘ಗಾಲ್ಫ್ ಕೋರ್ಸ್‌ಗಳು ಬಂದ್ ಆಗಿರುವ ಕಾರಣ ನಾವೆಲ್ಲರೂ ತುಂಬಾ ಸಮಸ್ಯೆಗೆ ಸಿಲುಕಿದ್ದೇವೆ. ಇದೀಗ ನಮ್ಮ ಕ್ಲಬ್ ನಮಗೆ ಅಕ್ಕಿ, ಧವಸಧಾನ್ಯಗಳು, ಈರುಳ್ಳಿ ಹಾಗೂ ಆಲೂಗಡ್ಡೆ ಸಹಿತ ರೇಶನ್ ಪೂರೈಸುತ್ತಿದೆ. ಆದರೆ ಇದು ಸಾಕಾಗುತ್ತಿಲ್ಲ. ನಾವು ಪ್ರತಿದಿನ 500 ರಿಂದ 600 ರೂ. ಗಳಿಸುತ್ತಿದ್ದೆವು. ಇದೀಗ ಕೆಲಸವಿಲ್ಲ’’ಎಂದು ಇಮ್ರಾನ್ ಹೇಳಿದ್ದಾರೆ.

ಬಾಂಬೆ ಪ್ರೆಸಿಡೆನ್ಸಿ ಗಾಲ್ಫ್ ಕ್ಲಬ್ ಪಡಿತರ ಒದಗಿಸುತ್ತಿದೆ. ಬೆಂಗಳೂರು ಗಾಲ್ಫ್ ಕ್ಲಬ್ ಮತ್ತೆ ಆರಂಭವಾಗುವ ತನಕ ಪ್ರತಿ ಕ್ಯಾಡಿಗೆ ತಲಾ 300 ರೂ. ನೀಡುತ್ತಿದೆ. ನೊಯ್ಡಿ ಗಾಲ್ಫ್ ಕ್ಲಬ್ ಕ್ಯಾಡಿಗಳಿಗೆ 2,000ರಿಂದ 2,500 ರೂ. ನೀಡುತ್ತಿದೆ. ಪಾಟ್ನಾ ಗಾಲ್ಫ್ ಕ್ಲಬ್ ಆಹಾರ ವಸ್ತುಗಳಲ್ಲದೆ 1,000 ರೂ. ನೀಡುತ್ತಿದೆ. ದಿಲ್ಲಿ ಗಾಲ್ಫ್ ಕ್ಲಬ್‌ನಲ್ಲಿರುವ ಕ್ಯಾಡಿ ವೆಲ್ಫೇರ್ ಟ್ರಸ್ಟ್ ಗೃಹ ಸಚಿವಾಲಯಕ್ಕೆ ಪತ್ರ ಬರೆದು, ದೇಶದಲ್ಲಿ ಆದಷ್ಟು ಬೇಗನೆ ಗಾಲ್ಫ್ ಕೋರ್ಸ್ ಆರಂಭಿಸುವಂತೆ ಕೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News