ಶ್ರೀಲಂಕಾದಲ್ಲಿ ಐಪಿಎಲ್ ಕುರಿತು ಚರ್ಚಿಸುವುದರಲ್ಲಿ ಅರ್ಥವಿಲ್ಲ

Update: 2020-04-18 07:14 GMT

ಹೊಸದಿಲ್ಲಿ, ಎ.17: ಈಗ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಐಪಿಎಲ್ ಟ್ವೆಂಟಿ-20 ಟೂರ್ನಿಯನ್ನು ಆಯೋಜಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಸಕ್ತಿ ವ್ಯಕ್ತಪಡಿಸಿದೆ. ಆದರೆ, ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ವಿರುದ್ಧ ಎಲ್ಲರೂ ಹೋರಾಡುತ್ತಿರುವ ಈ ಸಮಯದಲ್ಲಿ ಇಂತಹ ಪ್ರಸ್ತಾವ ಕುರಿತು ಚರ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವರ್ಷದ ಐಪಿಎಲ್ ಟೂರ್ನಿಯು ಮಾರ್ಚ್ 29ರಿಂದ ಮೇ 24ರ ತನಕ ನಿಗದಿಯಾಗಿತ್ತು. ಇದೀಗ ಕೋವಿಡ್-19 ಪಿಡುಗಿನ ಕಾರಣಕ್ಕೆ ಬಿಸಿಸಿಐ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕವಷ್ಟೇ ಟೂರ್ನಿಯನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ.

‘‘ನಮ್ಮ ದೇಶದಲ್ಲಿ ಕೆಲವೇ ಕೊರೋನ ವೈರಸ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಭಾರತಕ್ಕಿಂತ ಬೇಗನೆ ಸಹಜ ಸ್ಥಿತಿಗೆ ವಾಪಸಾಗುವ ನಿರೀಕ್ಷೆಯಿದೆ. ಶ್ರೀಲಂಕಾದಲ್ಲಿ ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಶ್ರೀಲಂಕಾ ಸಿದ್ಧವಾಗಿದೆ’’ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಮ್ಮಿ ಸಿಲ್ವಾ ಗುರುವಾರ ಹೇಳಿದ್ದರು.

 ಇಡೀ ವಿಶ್ವವೇ ತತ್ತರಿಸಿರುವ ಈ ಕ್ಷಣದಲ್ಲಿ ಏನೂ ಹೇಳುವ ಸ್ಥಿತಿಯಲ್ಲಿ ಬಿಸಿಸಿಐ ಇಲ್ಲ. ಈಗ ನಮಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಯಾವುದೇ ಪ್ರಸ್ತಾವ ಬಂದಿಲ್ಲ. ಈ ವಿಚಾರದ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯುವ ಯಾವುದೇ ಖಾತ್ರಿ ಇಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.

ಮಾರಣಾಂತಿಕ ವೈರಸ್‌ನ್ನು ಹತೋಟಿಗೆ ತರಲು ಹೆಚ್ಚಿನ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಎಲ್ಲ ಅಂತರ್‌ರಾಷ್ಟ್ರೀಯ ವಿಮಾನ ಹಾರಾಟ ಸ್ತಬ್ಧವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News