ಕ್ರಿಕೆಟ್ ವೀಕ್ಷಕ ವಿವರಣೆ ಹುದ್ದೆ ತ್ಯಜಿಸಿದ ಮೆಕಲ್ ಹೋಲ್ಡಿಂಗ್

Update: 2020-04-18 08:04 GMT

ಮುಂಬೈ, ಎ.17: ವಿಶ್ವ ಕ್ರಿಕೆಟ್‌ನ ಓರ್ವ ಗೌರವಾನ್ವಿತ, ತನ್ನ ಬಲವಾದ ಅಭಿಪ್ರಾಯ ಹಾಗೂ ತೀಕ್ಷ್ಣ ಟೀಕೆ-ಟಿಪ್ಪಣಿಗಳ ಮೂಲಕ ಹೆಸರುವಾಸಿಯಾಗಿರುವ ವೀಕ್ಷಕವಿವರಣೆಗಾರ ಮೈಕಲ್ ಹೋಲ್ಡಿಂಗ್ ತನ್ನ ಹುದ್ದೆಯನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿರುವ ತನ್ನ ಉದ್ಯೋಗದಾತರಿಗೆ ತನ್ನ ನಿರ್ಧಾರವನ್ನು ಹೋಲ್ಡಿಂಗ್ ಈಗಾಗಲೇ ತಿಳಿಸಿದ್ದಾರೆ.

  ‘‘ನನ್ನ ನಿರ್ಧಾರ ತೀರಾ ವೈಯಕ್ತಿಕ ಹಾಗೂ ನನ್ನ ಪರಿಸ್ಥಿತಿ ನನ್ನ ಉದ್ಯೋಗದಾತರಿಗೆ ಮಾತ್ರ ಗೊತ್ತಿದೆ. ಹೀಗಾಗಿ ಈ ವಿಚಾರವನ್ನು ನಾನು ಬಹಿರಂಗಪಡಿಸಲಾರೆ. ನನ್ನನ್ನು ಕ್ಷಮಿಸಿ’’ ಎಂದು 66ರ ಹರೆಯದ ವೆಸ್ಟ್‌ಇಂಡೀಸ್‌ನ ಮಾಜಿ ವೇಗದ ಬೌಲರ್ ಹೋಲ್ಡಿಂಗ್ ‘ಮುಂಬೈ ಮಿರರ್’ಗೆ ತಿಳಿಸಿದ್ದಾರೆ.

1991ರಲ್ಲಿ ವೀಕ್ಷಕವಿವರಣೆಗಾರರಾಗಿ ವೃತ್ತಿಬದುಕು ಆರಂಭಿಸಿರುವ ಹೋಲ್ಡಿಂಗ್ ಸ್ಕೈ ಕಂಪೆನಿಯಲ್ಲಿ 21 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.

‘‘2020ರ ಬಳಿಕ ಎಷ್ಟು ಸಮಯ ವೀಕ್ಷಕವಿವರಣೆ ನೀಡುವೆನೆಂದು ನನಗೆ ಗೊತ್ತಿಲ್ಲ. ನನಗೀಗ 66 ವಯಸ್ಸು. ನನಗೆ 36 ವರ್ಷವಲ್ಲ. ಈ ಕ್ಷಣದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಸ್ಕೈ ಸಂಸ್ಥೆಗೆ ತಿಳಿಸಿದ್ದೇನೆ. ಈ ವರ್ಷ ಸಂಪೂರ್ಣ ನಷ್ಟವಾದರೆ, 2021ರಲ್ಲಿ ಹುದ್ದೆಯಲ್ಲಿ ಮುಂದುವರಿಯುವ ಕುರಿತು ಯೋಚಿಸಬೇಕಾಗುತ್ತದೆ’’ಎಂದುಹೋಲ್ಡಿಂಗ್ ತಿಳಿಸಿದರು.

 ಇಂಗ್ಲೆಂಡ್‌ನಲ್ಲಿ ಕಳೆದ ವರ್ಷ ನಡೆದಿದ್ದ ವಿಶ್ವಕಪ್‌ನ ವೇಳೆ ಸಂಘಟಕರನ್ನು ಟೀಕಿಸಬೇಡಿ. ತಾಳ್ಮೆವಹಿಸಿ ಎಂದು ಐಸಿಸಿ ನೀಡಿರುವ ಸಲಹೆಯನ್ನು ತಿರಸ್ಕರಿಸಿದ್ದ ಹೋಲ್ಡಿಂಗ್, ನನ್ನ ತತ್ವದೊಂದಿಗೆ ರಾಜಿಯಾಗಲಾರೆ ಎಂದು ಐಸಿಸಿಗೆ ಉತ್ತರಿಸಿದ್ದರು.

ಅತ್ಯಂತ ವೇಗದ ಬೌಲಿಂಗ್‌ಗೆ ಖ್ಯಾತಿ ಪಡೆದಿದ್ದ ಹೋಲ್ಡಿಂಗ್ 60 ಟೆಸ್ಟ್ ಹಾಗೂ 102 ಏಕದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೀಕ್ಷಕವಿವರಣೆ ನೀಡಲಾರೆ ಎಂದು ನಿರ್ಧರಿಸಿದ್ದ ಅವರು ದೊಡ್ಡ ಆಫರ್‌ಗಳು ಬಂದಿದ್ದರೂ ತನ್ನ ನಿಲುವಿಗೆ ಬದ್ಧರಾಗಿದ್ದರು. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯೊಂದಿಗೆ ಭಿನ್ನಾಭಿಪ್ರಾಯ ಮೂಡಿದ ಬಳಿಕ ವಿಂಡೀಸ್ ಕ್ರಿಕೆಟ್ ಪರ ವೀಕ್ಷಕವಿವರಣೆ ನೀಡಲು ನಿರಾಕರಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News