×
Ad

ಉಡುಪಿ: ಕೊರೋನ ಸೋಂಕಿನಿಂದ ಸಂಪೂರ್ಣ ಗುಣಮುಖ; 3ನೇ ಯುವಕ ಮನೆಗೆ

Update: 2020-04-18 16:51 IST
ಸಾಂದರ್ಭಿಕ ಚಿತ್ರ

ಉಡುಪಿ, ಎ.18: ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಉಡುಪಿ ಆಸುಪಾಸಿನ ಮೂರನೇ ಯುವಕನನ್ನು ಇಂದು ಅಪರಾಹ್ನ 3 ಗಂಟೆಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಜ.29ರಂದು ಈ ಯುವಕನಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿತ್ತು. ಆದರೆ 12 ದಿನಗಳ ಚಿಕಿತ್ಸೆಯ ಬಳಿಕ ಪರೀಕ್ಷೆಗಾಗಿ ಕಳುಹಿಸಲಾದ ಈತನ ಮೊದಲ ಸ್ಯಾಂಪಲ್ ಎ.14ರಂದು ಪಾಸಿಟಿವ್ ಆದ ಕಾರಣ ಆತನ ಚಿಕಿತ್ಸೆ ಯನ್ನು ಮುಂದುರಿಸಲಾಗಿತ್ತು. ಆದರೆ ಆತನ ಎರಡನೇ ಮಾದರಿ ನೆಗೆಟಿವ್ ಆಗಿ ಬಂದಿದ್ದು, ನಿನ್ನೆ ಕಳುಹಿಸಲಾದ ಮೂರನೇ ಮಾದರಿಯೂ ಇಂದು ನೆಗೆಟಿವ್ ಆದ ಹಿನ್ನೆಲೆಯಲ್ಲಿ ಇಂದು ಅಪರಾಹ್ನ 2:55ಕ್ಕೆ ಆತನನ್ನು ಚಿಕಿತ್ಸೆ ಪಡೆಯುತಿದ್ದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು ಎಂದು ಡಾ.ಸೂಡ ತಿಳಿಸಿದರು.

ಇನ್ನು 14 ದಿನಗಳ ಕಾಲ ಮನೆಯಲ್ಲೇ ಹೋಮ್ ಕ್ವಾರಂಟೈನ್‌ನಲ್ಲಿರುವಂತೆ ಈತನಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಇಲೆಕ್ಟ್ರೀಷಿಯನ್ ವೃತ್ತಿಯ 29ರ ಹರೆಯ ಈ ಯುವಕ ತನ್ನ ಸ್ನೇಹಿತರೊಂದಿಗೆ ಕೆಲಸದ ನಿಮಿತ್ತ ಕೇರಳದ ತಿರುವನಂತಪುರಂಗೆ ತೆರಳಿದ್ದು, ಹಿಂದಿರುಗಿ ಬರುವಾರ ಕೇರಳ- ಕರ್ನಾಟಕ ಗಡಿಯ ತಲಪಾಡಿ ಚೆಕ್‌ಪೋಸ್ಟ್‌ನಿಂದ ನೇರವಾಗಿ ಉಡುಪಿಗೆ ಕರೆತಂದು ಮಾ.27ರಂದು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಮಾ.29ರಂದು ಈತನ ಸ್ಯಾಂಪಲ್ ಪಾಸಿಟಿವ್ ಆಗಿ ಬಂದಿತ್ತು. ಆ ಬಳಿಕ ಆತ ಕೆಎಂಸಿ ಹಾಗೂ ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು.

ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್ ಸೋಂಕು ಪತ್ತೆಯಾದ ಮೂವರು ಯುವಕರು ಆಸ್ಪತ್ರೆಯಿಂದ ಬಿಡುಗಡೆಗೊಂಡಂತಾಗಿದೆ. ಈಗ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಜಿಲ್ಲೆಯ ಯಾವುದೇ ಸೋಂಕಿತರು ಚಿಕಿತ್ಸೆಯಲ್ಲಿಲ್ಲ. ಭಟ್ಕಳದಿಂದ ಕರೆತರಲಾದ 26ರ ಹರೆಯದ ಗರ್ಭಿಣಿ ಮಹಿಳೆಯೊಬ್ಬರು ಮಾತ್ರ ಈಗ ಚಿಕಿತ್ಸೆ ಪಡೆಯುತಿದ್ದು, ಅವರ ಗಂಟಲು ದ್ರವದ ಮೊದಲ ಸ್ಯಾಂಪಲ್‌ನ್ನು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಇವರ ಎರಡು ಮಾದರಿ ಪರೀಕ್ಷೆಗಳೂ ನೆಗೆಟಿವ್ ಬಂದ ಬಳಿಕ ಅವರನ್ನೂ ಸಹ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ನಿನ್ನೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News