×
Ad

ಕೈರಂಪಣಿ ಮೀನುಗಾರಿಕೆಗೂ ಅವಕಾಶ ನೀಡಲು ಚಿಂತನೆ: ಸಚಿವ ಕೋಟ

Update: 2020-04-18 20:01 IST

ಕುಂದಾಪುರ, ಎ.18: ನಾಡದೋಣಿ ಜೊತೆ ಕೈರಂಪಣಿ, ಮಾಟುಬಲೆ ದೋಣಿಗಳಿಗೂ ಮೀನುಗಾರಿಕೆ ನಡೆಸಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆದರೆ ಇಲ್ಲಿ ಹೆಚ್ಚಿನ ಮೀನುಗಾರರು ಸೇರುವ ಸಂಭವ ಹಾಗೂ ಮೀನು ಮಾರುಕಟ್ಟೆ ವ್ಯವಸ್ಥೆ ಬಗ್ಗೆಯೂ ಪರಿಶೀಲನೆ ನಡೆಸಬೇಕಾದ ಅಗತ್ಯ ಇದೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕೊರೋನ ಕುರಿತು ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಕೈಗೊಂಡ ಕ್ರಮಗಳು ಹಾಗೂ ಕೈಗೊಳ್ಳಬೇಕಾದ ಅಗತ್ಯ ತುರ್ತು ಕ್ರಮಗಳ ಕುರಿತು ಕುಂದಾಪುರ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಪರಿಶೀಲನಾ ಸೆಯಲ್ಲಿ ಅವರು ಮಾತನಾಡುತಿದ್ದರು.

ಕೊರೋನ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೆ ಉಡುಪಿ ಹಾಗೂ ದ.ಕ. ಜಿಲ್ಲೆಗಳ ಗಡಿಗಳಲ್ಲಿ ವಿಧಿಸಿರುವ ನಿರ್ಬಂಧವನ್ನು ಸಡಿಲಿಕೆ ಮಾಡುವುದಿಲ್ಲ. ಅಗತ್ಯ ಸಂದರ್ಭದಲ್ಲಿ ಮಾತ್ರ ಸಂಬಂಧಪಟ್ಟವರು ಪರಿಶೀಲಿಸಿ ಪ್ರವೇಶ ಕಲ್ಪಿಸಲಿದ್ದಾರೆ. ಕಾನೂನು ಉಲ್ಲಂಘಿಸಿ ಒಳ ರಸ್ತೆಯ ಮೂಲಕ ಜಿಲ್ಲೆಗೆ ಪ್ರವೇಶ ಮಾಡಿದವರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಿ, ಮುಂದೆ ಕಾನೂನು ಕ್ರಮ ಜರಗಿಸಲಾಗುವುದು ಎಂದರು.

ಕೊರೋನ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯ ಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದ ಅವರು, ತಾಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 352 ಮಂದಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಸಹಕಾರದಲ್ಲಿ ಮನೆಮನೆ ಭೇಟಿ ವೇಳೆ ಕುಟುಂಬಗಳ ವಿವರ, ಅಗತ್ಯ ವಸ್ತುಗಳ ಕುರಿತು ಹಾಗೂ ಸಮಸ್ಯೆ ಬಗ್ಗೆ ಕೂಡ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು.

ಕುಂದಾಪುರದಲ್ಲಿ 612 ಮಂದಿ ಎಪಿಎಲ್ ಕಾರ್ಡ್‌ದಾರರು ಬಿಪಿಎಲ್‌ಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ ಸರಕಾರದ ಆದೇಶದಂತೆ ಮೇ ತಿಂಗಳಲ್ಲಿ ಪಡಿತರ ನೀಡಲಾಗುವುದು. ಈಗ ಅಕ್ಕಿ ದಾಸ್ತಾನು ಇಲ್ಲ. 1058 ಮಂದಿ ಕಾರ್ಡ್ ರಹಿತರಿಗೂ ಮುಂದಿನ ತಿಂಗಳಲ್ಲಿ ಪಡಿತರ ನೀಡಲು ಕ್ರಮಕೈಗೊಳ್ಳಲಾಗು ವುದು. ಶೇ.95ರಷ್ಟು ಪಡಿತರ ಈಗಾಗಲೇ ವಿತರಣೆಯಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಮಾತನಾಡಿ, ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ವಿದೇಶಗಳಿಂದ 603 ಮಂದಿ ಹಾಗೂ ಮಾ.16ರಿಂದ ಎ.16ರವರೆಗೆ ಹೊರ ಜಿಲ್ಲೆಗಳಿಂದ ಬಂದ 31,357 ಮಂದಿಯ ಆರೋಗ್ಯ ತಪಾಸಣೆ ನಡೆಸಿ, ಹೋಮ್ ಕ್ವಾರಂಟೈನ್‌ನಲ್ಲಿಡಲಾಗಿದೆ ಎಂದರು.

ಸಭೆಯಲ್ಲಿ ಕುಂದಾಪುರ ಎಸಿ ಕೆ.ರಾಜು, ತಹಶೀಲ್ದಾರ್‌ಗಳಾದ ತಿಪ್ಪೇಸ್ವಾಮಿ, ಬಸಪ್ಪಪೂಜಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಶೇಂಗಾಕ್ಕೆ ಬೆಂಬಲ ಬೆಲೆಗೆ ಪ್ರಯತ್ನ

ಕೋಟ, ವಂಡ್ಸೆ, ಕುಂದಾಪುರ, ಬೈಂದೂರು ಹೋಬಳಿಗಳಲ್ಲಿ ಶೇಂಗಾ ಬೆಳೆಸಲಾಗುತ್ತಿದ್ದು, ಸೂಕ್ತ ಮಾರುಕಟ್ಟೆ ಸಿಗದ ಕಾರಣ ಕೃಷಿ ಇಲಾಖೆಯಿಂದ ಬೆಂಬಲ ಬೆಲೆ ನೀಡುವ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಿ, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಕೃಷಿಕರಿಗೆ, ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಯಾವುದೇ ಪಾಸ್ ಅಗತ್ಯ ಇಲ್ಲ. ರೈತರಿಗೆ ಯಾರೂ ಕೂಡ ಅಡ್ಡಿಪಡಿಸುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ ಮಾತನಾಡಿ, ತಾಲೂಕಿನಾದ್ಯಂತ ಬೆಳೆಸಲಾದ ಟನ್‌ಗಟ್ಟಲೆ ಅನಾನಸನ್ನು ಈಗ ನಿರ್ಬಂಧ ತೆರವುಗೊಳಿಸಿ ಕೇರಳಕ್ಕೆ ಕಳುಹಿಸಲಾಗುತ್ತಿದೆ. ಕಲ್ಲಂಗಡಿಯನ್ನು ಶಿವಮೊಗ್ಗ, ಕೇರಳಕ್ಕೆ ಮಾರಾಟ ಮಾಡಲಾಗುತ್ತಿದೆ. ಉಪ್ಪುಂದದಲ್ಲಿರುವ ಹಾಪ್ ಕಾಮ್‌ನವರು ತರಕಾರಿಗಳನ್ನು ಖರೀದಿ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News