ಅರ್ಚಕರಿಗೆ ಒಂದೇ ಕಂತಿನಲ್ಲಿ ತಸ್ತಿಕು ಪಾವತಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಎ.18: ಮುಜರಾಯಿ ದೇವಸ್ಥಾನಗಳಲ್ಲಿ ದೈನಂದಿನ ಪೂಜೆಗಳು ನಿಂತ ಕಾರಣ ಕೇವಲ ತಟ್ಟೆ ಕಾಸಿನಿಂದ ಬದುಕುವ ಅರ್ಚಕರು ಈಗ ಸಂಕಷ್ಟಕ್ಕೀಡಾಗಿದ್ದಾರೆ. ಇವರಿಗೆ ಎರಡು ಕಂತಿನ ತಸ್ತಿಕು ಒಂದೇ ಕಂತಿನಲ್ಲಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಲಾಗುವುದು ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳು ಮುಚ್ಚಿರುವುದರಿಂದ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಿಲ್ಲ. ಅರ್ಚಕರು ಆಹಾರ ಸಾಮಾಗ್ರಿ ಕೊಡಿ ಮತ್ತು ತಸ್ತೀಕು ಹೆಚ್ಚಿಸಿ ಎಂಬ ಬೇಡಿಕೆ ಇರಿಸಿದ್ದಾರೆ. ಅರ್ಚಕರಿಗೆ ತೊಂದರೆಯಾಗದ ರೀತಿಯಲ್ಲಿ ಸಹಾಯ ಮಾಡಲು ಮುಜರಾಯಿ ಇಲಾಖೆ ಬದ್ಧವಾಗಿದೆ ಎಂದರು.
ಕುಮಾರ ಸ್ವಾಮಿ ಮಗನ ಮದುವೆಯಲ್ಲಿ ಕಾನೂನು ಉಲ್ಲಂಘನೆಯಾಗಿದೆ. ಇಂದು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಸ್ಥಳೀಯ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಇದರಲ್ಲಿ ಯಾವುದೇ ವ್ಯಕ್ತಿಗತ ವಿಚಾರಗಳು ಬರುವುದಿಲ್ಲ. ಕೇವಲ ಎಂಟು-ಹತ್ತು ಜನ ಭಾಗವಹಿಸಿ ಮದುವೆ ನಡೆದರೆ ಯಾರೂ ಆಕ್ಷೇಪಿಸುವುದಿಲ್ಲ. ಕುಮಾರಸ್ವಾಮಿ ಮಗನ ಮದುವೆಗೆ ಎಷ್ಟು ಜನ ಬಂದಿದ್ದಾರೆ ನನಗೆ ಗೊತ್ತಿಲ್ಲ ಎಂದು ಅವರು ಹೇಳಿದರು.
ಒಳನಾಡು ಮೀನುಗಾರಿಕೆ ವ್ಯವಸ್ಥಿತವಾಗಿ ಮುಂದುವರಿಯುತ್ತಿದೆ. ಇದ ರಿಂದ ಲಕ್ಷಾಂತರ ಮೀನುಗಾರರಿಗೆ ಸಹಾಯವಾಗುತ್ತಿದೆ. ಪ್ರಥಮ ಹಂತದಲ್ಲಿ 14,000 ನಾಡದೋಣಿಗಳಿಗೆ ಅವಕಾಶ ನೀಡಲಾಗಿದೆ. ಬಂದರು ಹೊರತು ಪಡಿಸಿ ಪ್ರತ್ಯೇಕ ಮಾರುಕಟ್ಟೆಯಲ್ಲಿ ವ್ಯವಸ್ಥೆ ಮಾಡಲಾ ಗಿದೆ ಎಂದು ಸಚಿವರು ತಿಳಿಸಿದರು.
ಯಾಂತ್ರೀಕೃತ ದೋಣಿಗಳಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಬಂದಿದ್ದು, ಆದರೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಕಷ್ಟವಾಗುತ್ತದೆ. ಬಂದರು ಪ್ರದೇಶಕ್ಕೆ ಬಂದರೆ ಸಾವಿರಾರು ಜನ ಸೇರುವ ಅಪಾಯವಿದೆ. ಯಾಂತ್ರಿಕೃತ ದೋಣಿಗಳಿಗೆ ಅವಕಾಶ ನೀಡುವ ಬಗ್ಗೆ ಜಿಲ್ಲಾ ಅಧಿಕಾರಿ ಗಳ ಜೊತೆ ಚರ್ಚೆ ಮಾಡಲಾಗುವುದು ಎಂದು ಅವರು ಹೇಳಿದರು.