×
Ad

ಮಂಗಳೂರು: ಪೌರ ಕಾರ್ಮಿಕರ ಹಸಿವು ತಣಿಸಿದ ಬಿ ಹ್ಯೂಮನ್, ಅಲೋಶಿಯಸ್ ಹಳೆ ವಿದ್ಯಾರ್ಥಿಗಳು

Update: 2020-04-18 20:29 IST

ಮಂಗಳೂರು, ಎ.18: ಕೊರೋನ ವಿರುದ್ಧದ ಹೋರಾಟದಲ್ಲಿ ಪ್ರತಿನಿತ್ಯ ಮಂಗಳೂರು ಮಹಾನಗರ ಪಾಲಿಕೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರ ಹಸಿವು ತಣಿಸುವ ಕಾಯಕಕ್ಕೆ ನಗರದ ‘ಟೀಂ ಬಿ ಹ್ಯೂಮನ್’ ಸಾಮಾಜಿಕ ಸೇವಾ ಸಂಸ್ಥೆ ಮುಂದಾಗಿದೆ.

ನಗರದ ಬಾವುಟಗುಡ್ಡೆ ಈದ್ಗಾ ಮೈದಾನದಲ್ಲಿ ಶನಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ರವೂಫ್ ಬಜಾಲ್, ಉದ್ಯಮಿ ಮನ್ಸೂರ್ ಅಹ್ಮದ್ ಆಝಾದ್, ಐನ ಗ್ರೂಪ್‌ನ ಅಶ್ರಫ್, ಸಿಕೋ ಆಸಿಫ್, ನ್ಯಾಯವಾದಿ ಶುಕೂರ್, ಯು.ಬಿ. ಸಲೀಂ, ಸಾಹಿಲ್ ಝಾಹಿರ್, ರಾಶ್ ಬ್ಯಾರಿ, ಮುನ್ನ ಕಮ್ಮರಡಿ, ಮುತ್ತಲಿಬ್ ಮತ್ತಿತರರ ಉಪಸ್ಥಿತಿಯಲ್ಲಿ ಆಯ್ದ 180 ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಲಾಯಿತು.

ನಗರ ಸ್ವಚ್ಛತಾ ಗುತ್ತಿಗೆಯ ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಪೌರಕಾರ್ಮಿಕರು ವೇತನ ವಿಳಂಬದಿಂದಾಗಿ ಸಂಕಷ್ಟದಲ್ಲಿರುವುದನ್ನು ಅರಿತ ಟೀಂ ಬಿ ಹ್ಯೂಮನ್ ಸಂಸ್ಥೆಯು, ಅಲೋಶಿಯಸ್ ಕಾಲೇಜ್‌ನ 1989ನೆ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳ ಬಳಗದ ಸಹಕಾರದಿಂದ ಕಿಟ್ ವಿತರಿಸಿತು.

ಜಿಲ್ಲೆಯ ಆಯ್ದ 1200 ದಿನಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಬಡವರ ಕುಟುಂಬದ ಮನೆಬಾಗಿಲಿಗೆ ತಂಡದ ಸದಸ್ಯರಾದ ಅನಾಫ್ ಡೀಲ್ಸ್, ಅಲ್ತಾಫ್, ಶಮೀಮ್, ಅಲ್ತಾಫ್, ಬಾಷಾ, ಪ್ರದೀಪ್, ವಿನ್ಸೆಂಟ್, ಶಿಯಾಜ್ ಡೀಲ್ಸ್, ನವಾಝ್ ಮತ್ತು ಹನೀಫ್ ಮತ್ತಿತರರು ಜಾತಿ, ಮತ ಭೇದವಿಲ್ಲದೆ ದಿನಸಿ ಕಿಟ್ ತಲುಪಿಸಿದೆ.

ನಗರದ ಉರ್ವ ಮತ್ತು ಸುರತ್ಕಲ್ ಪ್ರದೇಶದ ಪೌರಕಾರ್ಮಿಕರಿಗೆ ಮುಂದಿನ ಹಂತದಲ್ಲಿ ದಿನಸಿ ಕಿಟ್ ವಿತರಿಸುವ ಯೋಜನೆಯಿದ್ದು, ಹಸಿದವರ ಸಂಕಷ್ಟಗಳಿಗೆ ವಿದ್ಯಾರ್ಥಿಗಳು ಮತ್ತು ಯುವಜನರು ಮುಂದಾಗಬೇಕು ಎಂದು ಟೀಂ ಬಿ ಹ್ಯೂಮನ್‌ನ ಸ್ಥಾಪಕಾಧ್ಯಕ್ಷ ಆಸಿಫ್ ಡೀಲ್ಸ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News