ಹ್ಯಾಪಿ ಲಾಕ್ ಡೌನ್!?: ಕಂಗನಾ ರಾಣವತ್ ಹೊಸ ಶುಭಾಶಯ

Update: 2020-04-18 15:15 GMT

ದ್ವೇಷ ಕಾರುವ ಟ್ವೀಟ್ ಮಾಡಿದ್ದ ತನ್ನ ಸಹೋದರಿ ರಂಗೋಲಿ ಚಾಂಡೆಲ್ ಅವರನ್ನು ಬಾಲಿವುಡ್ ನಟಿ ಕಂಗನಾ ರಾಣವತ್ ಸಮರ್ಥಿಸಿಕೊಂಡಿದ್ದಾರೆ. ಈ ದ್ವೇಷದ ಟ್ವೀಟ್ ಕಾರಣದಿಂದಾಗಿ ರಂಗೋಲಿಯ ಖಾತೆಯನ್ನು ಈಗಾಗಲೇ ಟ್ವಿಟರ್ ಡಿಲಿಟ್ ಮಾಡಿದೆ.

ಇಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಟ್ವಿಟರ್ ಖಾತೆಯ ಮೂಲಕ ವಿಡಿಯೋದಲ್ಲಿ ಮಾತನಾಡಿದ ಕಂಗನಾ, ರಂಗೋಲಿ ವಿರುದ್ಧ ದೂರು ನೀಡಿದ ಜ್ಯುವೆಲ್ಲರಿ ಡಿಸೈನರ್ ಫರಾ ಅಲಿ ಖಾನ್ ಮತ್ತು ರೀಮಾ ಕಾಗ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

“ನನ್ನ ಸಹೋದರಿ ರಂಗೋಲಿ ಟ್ವೀಟ್ ಮಾಡಿ ವೈದ್ಯರ ಮೇಲೆ ದಾಳಿ ನಡೆಸುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದ್ದರು. ಆದರೆ ಫರಾ ಅಲಿ ಖಾನ್ ಮತ್ತು ರೀಮಾ ಕಾಗ್ತಿ ರಂಗೋಲಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದರು. ಇಂತಹ ಟ್ವೀಟ್ ನಿಮಗೆ ಸಿಕ್ಕಲ್ಲಿ ನಾನು ಮತ್ತು ರಂಗೋಲಿ ಇಬ್ಬರೂ ಕ್ಷಮೆ ಯಾಚಿಸುತ್ತೇವೆ. ಎಲ್ಲಾ ಮುಸ್ಲಿಮರು ಭಯೋತ್ಪಾದಕರು ಎಂದು ನಾವು ನಂಬುವುದಿಲ್ಲ ಅಥವಾ ಎಲ್ಲಾ ಮುಸ್ಲಿಮರು ವೈದ್ಯರ ಮೇಲೆ ದಾಳಿ ನಡೆಸುತ್ತಾರೆ ಎಂದು ನಾವು ಹೇಳುತ್ತಿಲ್ಲ” ಎಂದು ಕಂಗನಾ ಹೇಳಿದರು.

ಇದೇ ಸಂದರ್ಭ ಅವರು, "ಭಾರತೀಯರಿಂದ ಕೋಟ್ಯಾಂತರ ರೂ. ಹಣ ಗಳಿಸಿ ನಮ್ಮ ಪ್ರತಿಷ್ಠೆಗೆ ಹಾನಿ ಮಾಡುವ ಟ್ವಿಟರನ್ನು ಮುಚ್ಚಬೇಕು" ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು.

“ಜನರು ಪ್ರಧಾನಿ ವಿರುದ್ಧ, ಗೃಹ ಸಚಿವರು, ಆರೆಸ್ಸೆಸ್ ವಿರುದ್ಧ ದಾಳಿ ನಡೆಸಬಹುದು. ಅವರನ್ನು ಉಗ್ರರು ಎಂದು ಕರೆಯಬಹುದು. ಆದರೆ ನೈಜ ಉಗ್ರರನ್ನು ಉಗ್ರರು ಎಂದು ಕರೆಯುವಂತಿಲ್ಲ” ಎಂದವರು ಹೇಳಿದರು.

“ದೌರ್ಜನ್ಯಕ್ಕೊಳಗಾಗುವ ರಾಷ್ಟ್ರವಾದಿಗಳನ್ನು ರಕ್ಷಿಸಬೇಕು" ಎಂದು ಆಗ್ರಹಿಸಿದ ಅವರು, ‘ಹ್ಯಾಪಿ ಲಾಕ್ ಡೌನ್’ ಎಂದು ನಗುತ್ತಾ ಮಾತುಗಳನ್ನು ಮುಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News