ತೇಲ್ತುಂಬ್ಡೆ ಎನ್‌ಐಎ ಕಸ್ಟಡಿ ಎ.25ರವರೆಗೆ ವಿಸ್ತರಣೆ

Update: 2020-04-18 15:15 GMT

ಮುಂಬೈ,ಎ.18: ಇಲ್ಲಿಯ ವಿಶೇಷ ನ್ಯಾಯಾಲಯವು ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಆನಂದ ತೇಲ್ತುಂಬ್ಡೆ ಅವರ ಎನ್‌ಐಎ ಕಸ್ಟಡಿ ಅವಧಿಯನ್ನು ಎ.25ರವರೆಗೆ ವಿಸ್ತರಿಸಿ ಶನಿವಾರ ಆದೇಶಿಸಿದೆ.

 ತಾನಿನ್ನೂ ವಿಚಾರಣೆಯನ್ನು ಪೂರ್ಣಗೊಳಿಸಿಲ್ಲ,ಹೀಗಾಗಿ ಕಸ್ಟಡಿ ಅವಧಿಯನ್ನು ಏಳು ದಿನಗಳ ಕಾಲ ವಿಸ್ತರಿಸಬೇಕು ಎಂದು ಎನ್‌ಐಎ ನ್ಯಾಯಾಲಯವನ್ನು ಕೋರಿತ್ತು. ತೇಲ್ತುಂಬ್ಡೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಗೌತಮ ನವ್ಲಾಖಾ ಅವರು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಎ.14ರಂದು ಎನ್‌ಐಎ ನ್ಯಾಯಾಲಯಕ್ಕೆ ಶರಣಾಗಿದ್ದರು. ಅನಾರೋಗ್ಯದ ಕಾರಣದಿಂದಾಗಿ ಶರಣಾಗಲು ಹೆಚ್ಚಿನ ಸಮಯಾವಕಾಶ ನೀಡಬೇಕೆಂಬ ಅವರ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು.

ಪ್ರಕರಣದಲ್ಲಿ ಇತರ ಇಬ್ಬರು ಆರೋಪಿಗಳಾದ ವರವರ ರಾವ್ ಮತ್ತು ಶೋಮಾ ಸೇನ್ ಅವರ ತಾತ್ಕಾಲಿಕ ಜಾಮೀನು ಅರ್ಜಿಗಳನ್ನು ವಿಶೇಷ ನ್ಯಾಯಾಲಯವು ಎ.1ರಂದು ತಿರಸ್ಕರಿಸಿತ್ತು. ತಾವು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದೇವೆ ಹಾಗೂ ತಮ್ಮ ವಯಸ್ಸು ಮತ್ತು ಅನಾರೋಗ್ಯದಿಂದಾಗಿ ಕೊರೋನ ವೈರಸ್ ಸೋಂಕಿಗೆ ಸುಲಭವಾಗಿ ತುತ್ತಾಗುವ ಅಪಾಯವಿದೆ ಎಂದು ಅವರು ತಿಳಿಸಿದ್ದರು. ಸದ್ಯ ರಾವ್(80) ನವಿ ಮುಂಬೈನ ತಲೋಜಾ ಜೈಲಿನಲ್ಲಿ ಮತ್ತು ಸೇನ್(61) ಮುಂಬೈನ ಬೈಕಳಾ ಜೈಲಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News