ಒತ್ತಡದಲ್ಲಿ ತಪ್ಪಾಗುವುದು ಸಹಜ: ಚೀನಾ ಬಗ್ಗೆ ಡಬ್ಲ್ಯುಎಚ್‌ಒ
ಜಿನೀವ (ಸ್ವಿಟ್ಸರ್‌ಲ್ಯಾಂಡ್), ಎ. 18: ಕೊರೋನವೈರಸ್ ಸಾಂಕ್ರಾಮಿಕ ನಿಯಂತ್ರಣಕ್ಕೆ ಬಂದ ಬಳಿಕ, ಹಲವು ದೇಶಗಳು ತಮ್ಮ ಸಾವಿನ ಸಂಖ್ಯೆಗಳನ್ನು ಪರಿಷ್ಕರಿಸುವ ಮೂಲಕ ಚೀನಾದ ಮಾದರಿಯನ್ನು ಅನುಸರಿಸುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶುಕ್ರವಾರ ಹೇಳಿದೆ.
ಚೀನಾದ ಕೊರೋನವೈರಸ್ ಸಾಂಕ್ರಾಮಿಕದ ಕೇಂದ್ರಬಿಂದುವಾಗಿದ್ದ ವುಹಾನ್ ನಗರವು ತನ್ನ ಕೋವಿಡ್-19 ಸಾವಿನ ಸಂಖ್ಯೆಯನ್ನು ಶುಕ್ರವಾರ ಪರಿಷ್ಕರಿಸಿದ್ದು, ಹಾಲಿ ಸಂಖ್ಯೆಗೆ ಇನ್ನೂ 50 ಶೇಕಡದಷ್ಟನ್ನು ಸೇರಿಸಿದೆ. ಕೊರೋನವೈರಸ್‌ಗೆ ಸಂಬಂಧಿಸಿದ ಸಾವಿನ ಸಂಖ್ಯೆಯನ್ನು ದಾಖಲಿಸುವಾಗ ಕೆಲವು ತಪ್ಪುಗಳಾಗಿವೆ ಎನ್ನುವುದನ್ನು ಅದು ಒಪ್ಪಿಕೊಂಡಿದೆ.
ಆ ಸಮಯದಲ್ಲಿ ವುಹಾನ್ ವೈರಸ್‌ನಿಂದ ಜರ್ಝರಿತವಾಗಿತ್ತು. ಅತಿ ಒತ್ತಡದಿಂದಾಗಿ ಬಳಲಿದ್ದ ಅಧಿಕಾರಿಗಳಿಗೆ ಪ್ರತಿಯೊಂದು ಸಾವು ಮತ್ತು ಸೋಂಕನ್ನು ಸರಿಯಾಗಿ ದಾಖಲಿಸಲು ಸಾಧ್ಯವಾಗಿರಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್-19 ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮರಿಯಾ ವಾನ್ ಕೆರ್ಖೋವ್ ಜಿನೀವದಲ್ಲಿ ವೀಡಿಯೊಕಾನ್ಫರೆನ್ಸ್ ಮೂಲಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.