×
Ad

ಸರಕಾರಿ ವಾಹನದಲ್ಲಿ ಅಕ್ರಮವಾಗಿ ಯಾರನ್ನೂ ಸಾಗಿಸಿಲ್ಲ: ಮುಹಮ್ಮದ್ ಮೋನು

Update: 2020-04-18 22:32 IST

ಮಂಗಳೂರು, ಎ.18: ತಾನು ಅಕ್ರಮವಾಗಿ ಯಾರನ್ನೂ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಸಾಗಿಸಿಲ್ಲ. ಮಾನವೀಯತೆ ದೃಷ್ಟಿಯಿಂದ 5 ವರ್ಷದ ಮಗುವನ್ನು ಹೆತ್ತವರಿಗೆ ಒಪ್ಪಿಸಿದ್ದನ್ನೇ ದೊಡ್ಡದಾಗಿ ಬಿಂಬಿಸಿ ತನ್ನನ್ನು ತಪ್ಪಿತಸ್ಥರ ಸಾಲಲ್ಲಿ ನಿಲ್ಲಿಸುವ ಪ್ರಯತ್ನ ಮಾಡಲಾಗಿದೆ ಎಂದು ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ತಿಳಿಸಿದ್ದಾರೆ.

‘ಮಂಗಳೂರು ತಾಪಂ ಅಧ್ಯಕ್ಷರ ನಾಮಫಲಕ ಇರುವ ವಾಹನದಲ್ಲಿ ಪ್ರಯಾಣಿಕರ ಸಾಗಾಟ ?’ಎಂಬ ಶೀರ್ಷಿಕೆಯಡಿ ಎ.18ರಂದು ಪ್ರಕಟವಾದ ಸುದ್ದಿಗೆ ಸಂಬಂಧಿಸಿ ಸ್ಪಷ್ಟನೆ ನೀಡಿರುವ ಅವರು ಚಿಕ್ಕಮಗಳೂರು ಮೂಲದ ದಂಪತಿಯೊಂದರ 5 ವರ್ಷದ ಮಗುವನ್ನು ಲಾಕ್‌ಡೌನ್‌ಗೆ ಮುನ್ನ ಅಡ್ಯಾರ್ ತನ್ನ ಸಂಬಂಧಿಕರ ಮನೆಗೆ ಕರೆತರಲಾಗಿತ್ತು. ಲಾಕ್‌ಡೌನ್ ಬಳಿಕ ಈ ಮಗುವಿನ ಸಂಬಂಧಿಕರು ತನ್ನನ್ನು ಸಂಪರ್ಕಿಸಿ ಮಗುವನ್ನು ಹೇಗಾದರೂ ಚಿಕ್ಕಮಗಳೂರಿಗೆ ಮುಟ್ಟಿಸಬೇಕು ಎಂದು ಗೋಗರೆದಿದ್ದರು. ಅದರಂತೆ ತಾನು ಸರಕಾರಿ ವಾಹನದಲ್ಲಿ ಮಗುವನ್ನು ಕರೆದುಕೊಂಡು ಚಿಕ್ಕಮಗಳೂರು ಗಡಿ ತನಕ ಬಿಡಲು ಹೊರಟಿದ್ದೆವು. ಆ ಕಡೆಯಿಂದ ಮಗುವಿನ ಹೆತ್ತವರು ಬೇರೆ ವಾಹನದಲ್ಲಿ ಬಂದು ಮಗುವನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು. ಆದರೆ ಅವರು ಬಾರದ್ದರಿಂದ ಬಣಕಲ್ ತನಕ ಹೋಗಿದ್ದೆವು. ಕೊಟ್ಟಿಗೆಹಾರದಲ್ಲಿ ವಾಹನವನ್ನು ತಡೆದ ಪೊಲೀಸರು ಚಿಕ್ಕಮಗಳೂರು ಜಿಲ್ಲೆ ಪ್ರವೇಶಿಸದಂತೆ ವಾಪಸ್ ಕಳುಹಿಸಿದ್ದರು. ಈ ಮದ್ಯೆ ತಾನಿದ್ದ ವಾಹನದಲ್ಲಿ ಬಣಕಲ್ನ ಹಿತೈಷಿಯೊಬ್ಬರಿದ್ದು, ಅವರ ಮನೆಗೆ ತೆರಳಿ ರೇಶನ್ ಕಿಟ್ ನೀಡಿ ಬಂದಿದ್ದೆವು. ಈ ಸಂದರ್ಭ ಯಾರೋ ಫೋಟೋ ತೆಗೆದು ಪೊಲೀಸರಿಗೆ ತಪ್ಪುಮಾಹಿತಿ ನೀಡಿ ವಾಹನದಲ್ಲಿ 15 ಮಂದಿಯನ್ನು ತುಂಬಿಸಿಕೊಂಡು ಹೋಗಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಅದರಂತೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ರೇಶನ್ ಕಿಟ್ ನೀಡಿದ ಮನೆಗೆ ತೆರಳಿ ಪರಿಶೀಲಿಸಿದಾಗ ಆ ಮನೆಗೆ ತಾನು ಯಾರನ್ನೂ ಕರೆದುಕೊಂಡು ಹೋಗಿಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೂ ಕೆಲವರು ಸುಳ್ಳು ಸುದ್ದಿ ಹಬ್ಬಿಸಿಸಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News