ಮೂಡುಬಿದಿರೆ: ರಕ್ತದಾನ ಮಾಡಿ ಮಹಿಳೆಯ ಜೀವ ರಕ್ಷಿಸಿದ ಪೊಲೀಸ್ ಕಾನ್‍ಸ್ಟೇಬಲ್
ಮೂಡುಬಿದಿರೆ : ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯೊಬ್ಬರಿಗೆ ರಕ್ತದ ಅಗತ್ಯವಿರುವುದನ್ನು ಮನಗಂಡ ಮೂಡುಬಿದಿರೆ ಪೊಲೀಸ್ ಕಾನ್‍ಸ್ಟೇಬಲ್ ಬಸವರಾಜ್ ಪಾಟೀಲ್ ಎಂಬವರು ತನ್ನ ಕೆಲಸದ ಒತ್ತಡದ ಮಧ್ಯೆಯೂ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದು ಜೀವ ರಕ್ಷಣೆಗೆ ನೆರವಾಗಿದ್ದಾರೆ.
ಆಳ್ವಾಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ಕಳದ ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತದ ಅವಶ್ಯಕತೆಯಿತ್ತು. ಈ ಬಗ್ಗೆ ಮಾಹಿತಿ ಪಡಕೊಂಡ ಬ್ಲಡ್ ಡೋನರ್ಸ್ ಹೆಲ್ಪ್ ಲೇನ್ ಸಂಘಟನೆಯ ಸದಸ್ಯರು ಮೂಡುಬಿದಿರೆ ಪೊಲೀಸ್‍ಠಾಣೆಯ ಸಮಾಜಮುಖಿ ಮನಸ್ಸಿನ ಕಾನ್‍ಸ್ಟೇಬಲ್ ಬಸವರಾಜ್ ಪಾಟೀಲ್ ಅವರ ಸಹಾಯ ಕೇಳಿದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಬಸವರಾಜ್ ಅವರು ತಕ್ಷಣ ಸ್ಪಂದಿಸಿ ಪೊಲೀಸ್ ಇನ್‍ಸ್ಪೆಕ್ಟರ್ ದಿನೇಶ್ ಕುಮಾರ್ ಅವರ ಅನುಮತಿ ಪಡೆದು ಆಸ್ಪತ್ರೆಗೆ ತೆರಳಿ ಮಹಿಳೆಗೆ ರಕ್ತ ನೀಡಿ ನೆರವಾದರು.
ವಾರಿಯರ್ ಆಫ್ ದಿ ಡೇ ಗೆ ಆಯ್ಕೆ: ಲಾಕ್ ಲಾಕ್ ಡೌನ್ ಅವಧಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಮತ್ತು ರಕ್ತದಾನ ಮಾಡಿ ಮಹಿಳೆಯೊಬ್ಬರ ಜೀವರಕ್ಷಣೆಗೆ ನೆರವಾದ ಬಸವರಾಜ್ ಪಾಟೀಲ್ ಅವರನ್ನು ಪೊಲೀಸ್ ಕಮಿಷನರ್ ಡಾ.ಹರ್ಷ ಅವರು ಶನಿವಾರದ `ಕೋವಿಡ್ ವಾರಿಯರ್ ಆಫ್ ದಿ ಡೇ' ಗೌರವಕ್ಕೆ ಆಯ್ಕೆ ಮಾಡಿದ್ದಾರೆ.