×
Ad

ಮೋಹನ್ ಬಗಾನ್ ಚಾಂಪಿಯನ್

Update: 2020-04-19 11:25 IST

ಹೊಸದಿಲ್ಲಿ, ಎ.18: ಕೋರೊನ ವೈರಸ್‌ನಿಂದಾಗಿ ಉಂಟಾಗಿರುವ ಲಾಕ್‌ಡೌನ್ ಪರಿಣಾಮ ಐ-ಲೀಗ್‌ನ ಉಳಿದ 28 ಪಂದ್ಯಗಳನ್ನು ರದ್ದುಪಡಿಸಲು ಲೀಗ್‌ನ್ನು ಆಯೋಜಿಸುತ್ತಿರುವ ಸಮಿತಿಯು ಶನಿವಾರ ನಿರ್ಧರಿಸಿದೆ. ಹೀಗಾಗಿ ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ್ದ ಮೋಹನ್ ಬಗಾನ್ ತಂಡವನ್ನು ಚಾಂಪಿಯನ್ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಸ್ಪರ್ಧಾವಳಿಯಲ್ಲಿ ನಾಲ್ಕು ಸುತ್ತುಗಳ ಪಂದ್ಯ ಬಾಕಿ ಇರುವಾಗಲೇ ಬಗಾನ್ ತಂಡ ಐ-ಲೀಗ್ ಕಿರೀಟ ಧರಿಸುವುದನ್ನು ಖಚಿತಪಡಿಸಿತ್ತು.

 ಐ-ಲೀಗ್ ಸಮಿತಿಯು ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆ ಸೇರಿತು. ರಾಷ್ಟ್ರವ್ಯಾಪಿತಿ ಮೇ 3ರ ತನಕ ಲಾಕ್‌ಡೌನ್ ಇರುವ ಕಾರಣ ಐ-ಲೀಗ್‌ನ್ನು ಮತ್ತೆ ಆರಂಭಿಸಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡಲು ನಿರ್ಧರಿಸಿದೆ. ಐ-ಲೀಗ್ ಸಮಿತಿಯ ಶಿಫಾರಸನ್ನು ಎಐಎಫ್‌ಎಫ್ ಕಾರ್ಯಕಾರಿ ಸಮಿತಿಯು ಅನುಮೋದಿಸುವ ಔಪಚಾರಿಕೆ ಮಾತ್ರ ಬಾಕಿ ಇದೆ.

2019-20ರ ಋತು ಮುಕ್ತಾಯವಾಗುವ ಸಾಧ್ಯತೆ ಕ್ಷೀಣವಾಗಿದೆ ಎಂದು ಸಮಿತಿಯು ಶಿಫಾರಸು ಮಾಡಿದೆ. 2019-20ರ ಋತುವಿನಲ್ಲಿ ಮೋಹನ್ ಬಗಾನ್ ಹೀರೊ ಐ-ಲೀಗ್ ಚಾಂಪಿಯನ್ ಎಂದು ಘೋಷಿಸಲಾಗಿದೆ. 2020ರ ಮಾರ್ಚ್ 14ರ ತನಕ ಹೀರೊ ಲೀಗ್ ಅಂಕಪಟ್ಟಿಯಲ್ಲಿ 16 ಪಂದ್ಯಗಳಲ್ಲಿ 39 ಅಂಕ ಗಳಿಸಿದ್ದ ಬಗಾನ್ ತಂಡ ಮೊದಲ ಸ್ಥಾನದಲ್ಲಿತ್ತು ಎಂದು ಎಐಎಫ್‌ಎಫ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.

 ಎಐಎಫ್‌ಎಫ್ ಲೀಗ್ ಸಮಿತಿ ಹಾಗೂ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಹಾಗೂ ಸಿಇಒ ಸುನಂದೊ ಧರ್ ಶನಿವಾರ ಸಭೆ ಕರೆದಿದ್ದರು. ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ 2019-20ರ ಕ್ರೀಡಾ ಋತುವಿನ ಲೀಗ್ ವ್ಯವಹಾರಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಯಿತು. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಹಲವು ರಾಜ್ಯ ಸರಕಾರಗಳ ಸಲಹೆಗಳ ಮೇರೆಗೆ ಎಐಎಫ್‌ಎಫ್‌ನ ಫುಟ್ಬಾಲ್ ಚಟುವಟಿಕೆಗಳನ್ನು ರದ್ದುಪಡಿಸಲು ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News