ಬಂಟ್ವಾಳ ಮೂಲದ ಮಹಿಳೆ ಮೃತ್ಯು: ದಕ್ಷಿಣ ಕನ್ನಡದಲ್ಲಿ ಕೊರೋನಗೆ ಮೊದಲ ಬಲಿ
ಬಂಟ್ವಾಳ, ಎ.19: ತಾಲೂಕಿನ ಬಂಟ್ವಾಳ ಕಸಬಾ ಗ್ರಾಮದ ಮಹಿಳೆಯೊಬ್ಬರು ಕೋವಿಡ್ - 19 (ಕೊರೋನ) ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಇದು ಕೊರೋನ ವೈರಸ್ ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ರವಿವಾರ ಸಂಜೆ ಈ ಕುರಿತು ಬುಲೆಟಿನ್ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ, ತೀವ್ರ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ 50 ವರ್ಷ ಪ್ರಾಯದ ಮಹಿಳೆಯನ್ನು ತುರ್ತು ಚಿಕಿತ್ಸೆಗಾಗಿ ಎ.18ರಂದು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿಸಿದ್ದಾರೆ.
ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದ ಮಹಿಳೆಯ ಗಂಟಲ ದ್ರವ ಮಾದರಿಯನ್ನು ತೆಗೆದು ಕೋವಿಡ್ - 19 ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ರವಿವಾರ ಬೆಳಗ್ಗೆ 9:15ರ ವೇಳೆಗೆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.
ರವಿವಾರ ಅಪರಾಹ್ನ ಮಹಿಳೆಯ ಗಂಟಲ ದ್ರವ ಮಾದರಿಯ ವರದಿ ಬಂದಿದ್ದು ಮಹಿಳೆಗೆ ಕೋವಿಡ್ - 19 ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೋವಿಡ್ - 19 ವೈರಸ್ ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮೃತದೇಹದ ಅಂತ್ಯ ಸಂಸ್ಕಾರವನ್ನು ವೈದ್ಯಕೀಯ ಶಿಷ್ಟಾಚಾರದಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೃತ ಮಹಿಳೆಯ ಮನೆ ಬಂಟ್ವಾಳ ಕಸಬಾ ಗ್ರಾಮದ ಬಂಟ್ವಾಳ ಪೇಟೆಯ ಮಧ್ಯಭಾಗದಲ್ಲಿ ಇದ್ದು, ಮುಂಜಾಗೃತ ಕ್ರಮವಾಗಿ ಪೇಟೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಬಂಟ್ವಾಳ ಕಸಬ, ಜಕ್ರಿಬೆಟ್ಟು, ಬಡ್ಡಕಟ್ಟೆ, ಬಂಟ್ವಾಳ ಕೆಳಗಿನ ಪೇಟೆ, ಬಸ್ತಿಪಡ್ಪು ಸಹಿತ ಪಟ್ಟಣಕ್ಕೆ ಪ್ರವೇಶಿಸುವ ಮತ್ತು ಹೊರ ಹೋಗುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.