ಉಡುಪಿ ಜಿಲ್ಲೆಯಲ್ಲಿ ಮತ್ತೆ 118 ಕೊರೋನ ವೈರಸ್ ಸ್ಯಾಂಪಲ್‌ಗಳು ನೆಗೆಟಿವ್
ಉಡುಪಿ, ಎ.17: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪರೀಕ್ಷೆಗಾಗಿ ಈವರೆಗೆ ಉಡುಪಿ ಜಿಲ್ಲೆಯಿಂದ ಬಾಕಿ ಇರುವ ಒಟ್ಟು 187 ಗಂಟಲು ದ್ರವದ ಸ್ಯಾಂಪಲ್‌ಗಳಲ್ಲಿ ಇಂದು 118 ನೆಗೆಟಿವ್ ಆಗಿ ಬಂದಿವೆ. ಇನ್ನು ರವಿವಾರ ಪರೀಕ್ಷೆಗೆ ಕಳುಹಿಸಿದ 26 ಸ್ಯಾಂಪಲ್‌ಗಳು ಸೇರಿದಂತೆ ಇನ್ನು ಒಟ್ಟು 95ರ ವರದಿ ಬರಬೇಕಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ 26 ಗಂಟಲು ದ್ರವ ಸ್ಯಾಂಪಲ್‌ಗಳಲ್ಲಿ 11 ಕೊರೋನ ಶಂಕಿತರ ಸಂಪರ್ಕಕ್ಕೆ ಬಂದವರದ್ದಾದರೆ, ನಾಲ್ಕು ತೀವ್ರ ಉಸಿರಾಟದ ತೊಂದರೆಯವರದ್ದು. ಆರು ಮಂದಿ ಶೀತಜ್ವರದ ಕಾರಣಕ್ಕಾಗಿ ಹಾಗೂ ಉಳಿದ ಐದು ಮಂದಿ ವಿವಿಧ ಕೊರೋನ ಹಾಟ್‌ಸ್ಪಾಟ್ ನಿಂದ ಮಳಿದವರಾಗಿದ್ದಾರೆ ಎಂದು ತಿಳಿಸಿದರು.
ರವಿವಾರ ಐವರು ಕೋವಿಡ್-19 ರೋಗಲಕ್ಷಣದೊಂದಿಗೆ ಹೊಸದಾಗಿ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರೆಲ್ಲರೂ ಪುರುಷರಾ ಗಿದ್ದು, ಇವರಲ್ಲಿ ಮೂವರು ತೀವ್ರ ಉಸಿರಾಟದ ತೊಂದರೆಗಾಗಿ ಬಂದಿದ್ದರೆ, ಒಬ್ಬ ಶಂಕಿತ ಕೋವಿಡ್ ಸೋಂಕಿನ ಪರೀಕ್ಷೆಗೆ ಬಂದಿದ್ದಾರೆ. ಒಬ್ಬ ಮಾತ್ರ ಶೀತಜ್ವರ ಬಾಧೆಗೆ ದಾಖಲಾಗಿದ್ದಾರೆ. ಇಂದು ನಾಲ್ವರು ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, ಒಟ್ಟಾರೆಯಾಗಿ 217 ಮಂದಿ ಈವರೆಗೆ ಬಿಡುಗಡೆಗೊಂಡಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.
ಜಿಲ್ಲೆಯಿಂದ ಇದುವರೆಗೆ ಒಟ್ಟು 894 ಮಂದಿಯ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ ಈವರೆಗೆ 799 ಮಂದಿಯ ವರದಿ ಬಂದಿವೆ. 793 ಸ್ಯಾಂಪಲ್ ನೆಗೆಟಿವ್ ಆಗಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿವೆ. ಪಾಸಿಟಿವ್ ಬಂದ ಮೂವರೂ ಈಗಾಗಲೇ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗೆಗೊಂಡಿದ್ದಾರೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಉಸಿರಾಟದ ತೊಂದರೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಬಂದವರು ಹಾಗೂ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು ಸೇರಿ ಇಂದು ಮತ್ತೆ 109 ಮಂದಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2826 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿ ಕೊಂಡಂತಾಗಿದೆ. ಇವರಲ್ಲಿ 1825 (ಇಂದು 63) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 2162 (25) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿ ದ್ದಾರೆ. ಒಟ್ಟು 572 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 35 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ. ಇಂದು ಒಬ್ಬ ಆಸ್ಪತ್ರೆ ಕ್ವಾರಂಟೈನ್‌ನಿಂದ ಬಿಡುಗಡೆ ಗೊಂಡಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಬಾರದ ವರದಿ: ಕೊರೋನ ಸೋಂಕಿನೊಂದಿಗೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತಿದ್ದ ಭಟ್ಕಳದ 26ರ ಹರೆಯದ ಗರ್ಭಿಣಿ ಮಹಿಳೆ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತಿದ್ದು, ನಿನ್ನೆ ಪರೀಕ್ಷೆಗಾಗಿ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾದ ಇವರ ಗಂಟಲು ದ್ರವದ ಮೊದಲ ಸ್ಯಾಂಪಲ್‌ನ ವರದಿ ಇಂದು ಬಂದಿಲ್ಲ. ಅದು ನಾಳೆ ಬರುವ ನಿರೀಕ್ಷೆ ಇದೆ. ಅವರ ಎರಡು ಮಾದರಿಯ ಪರೀಕ್ಷೆಗಳೂ ನೆಗೆಟಿವ್ ಬಂದ ಬಳಿಕ ಅವರನ್ನೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಡಾ.ಸೂಡ ತಿಳಿಸಿದರು.