×
Ad

ಕೊರೋನ ವೈರಸ್: ದ.ಕ.ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‌ಗಳ ಸಂಖ್ಯೆಯಲ್ಲಿ ಇಳಿಮುಖ

Update: 2020-04-19 22:20 IST

ಮಂಗಳೂರು, ಎ.19: ಕೊರೋನ ವೈರಸ್ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಹೋಂ ಕ್ವಾರಂಟೈನ್ ಮಾಡುತ್ತಿದ್ದವರ ಸಂಖ್ಯೆಯಲ್ಲಿ ಇದೀಗ ಇಳಿಮುಖವಾಗಿದೆ.

ತಿಂಗಳ ಹಿಂದೆ ಅಂದರೆ, ಮಾ.20ರಂದು ಜಿಲ್ಲೆಯಲ್ಲಿ 1,654 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದರೆ ಆ ಬಳಿಕ ಅದರ ಸಂಖ್ಯೆ 5 ಸಾವಿರದ ಗಡಿ ದಾಟಿತ್ತು. ಶನಿವಾರ 260 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದರೆ, ರವಿವಾರ ಅದರ ಸಂಖ್ಯೆ 120ಕ್ಕೆ ಇಳಿದಿದೆ.

ರವಿವಾರ 167 ಮಂದಿಯ ಗಂಟಲಿನ ದ್ರವದ ಮಾದರಿಯನ್ನು ವೆನ್ಲಾಕ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಮಧ್ಯೆ ರವಿವಾರ 147 ಮಂದಿಯ ವರದಿಯನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 2 ಪಾಸಿಟಿವ್ ಮತ್ತು 145 ನೆಗೆಟಿವ್ ಆಗಿದೆ. ಪಾಸಿಟಿವ್ ಪೈಕಿ ಒಬ್ಬ ಮಹಿಳೆ ಮೃತಪಟ್ಟರೆ ಇನ್ನೊಬ್ಬ ಮಹಿಳೆ ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 164 ಮಂದಿಯ ವರದಿ ಬರಲು ಬಾಕಿ ಇದೆ. ಜ್ವರದ ಹಿನ್ನೆಲೆಯಲ್ಲಿ ರವಿವಾರ 4 ಮಂದಿಯ ಮೇಲೆ ನಿಗಾ ಇಡಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ ಇದೀಗ 15 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ರವಿವಾರ 28 ದಿನದ ಕ್ವಾರಂಟೈನ್ (ನಿಗಾ) ಅವಧಿಯನ್ನು 5,953 ಮಂದಿ ಪೂರೈಸಿದ್ದಾರೆ.

ಈವರೆಗೆ 1031 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 867 ಮಂದಿಯ ವರದಿಯನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 852 ಮಂದಿಯ ವರದಿಯು ನೆಗೆಟಿವ್ ಆಗಿದ್ದರೆ, 14 ಮಂದಿಯ ವರದಿಯು ಪಾಸಿಟಿವ್ ಆಗಿತ್ತು. ಪಾಸಿಟಿವ್‌ಗಳ ಪೈಕಿ 11 ಮಂದಿ ಗುಣಮುಖರಾಗಿ ಈಗಾಗಲೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉಳಿದಂತೆ ಇಬ್ಬರು ಚೇತರಿಸುತ್ತಿದ್ದರೆ, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News