ಲ್ಯಾಬ್‌ನಲ್ಲಿ ವೈರಸ್ ಸೃಷ್ಟಿಯಾಗಿಲ್ಲ: ಆರೋಪ ನಿರಾಕರಿಸಿದ ವುಹಾನ್ ವೈರಾಣು ಪ್ರಯೋಗಾಲಯದ ನಿರ್ದೇಶಕ

Update: 2020-04-19 17:45 GMT

ಬೀಜಿಂಗ್,ಎ.19: ವಿಶ್ವದಾದ್ಯಂತ 1.60 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿತೆಗೆದು ಕೊಂಡಿರುವ ನೋವೆಲ್ ಕೊರೋನ ವೈರಸ್ ಮೂಲ ತಾನೆಂಬ ಆರೋಪವನ್ನು ಚೀನಾದ ವುಹಾನ್ ಪ್ರಾಂತದ ವೈರಾಣು ಪ್ರಯೋಗಾಲಯವು ಶನಿವಾರ ನಿರಾಕರಿಸಿದೆ.

 ವುಹಾನ್ ವೈರಾಣು ಪ್ರಯೋಗಾಲಯದ ನಿರ್ದೇಶಕ ಯುವಾನ್ ಝಿಮಿಂಗ್ ಇದೇ ಮೊದಲ ಬಾರಿಗೆ ನೀಡಿದ ಮಾಧ್ಯಮ ಸಂದರ್ಶದಲ್ಲಿ ಕೋವಿಡ್- 19 ಸೋಂಕಿಗೆ ಕಾರಣವಾದ ವೈರಸ್, ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿತ್ತೆಂಬ ವದಂತಿಗಳನ್ನು ತಳ್ಳಿಹಾಕಿದರು.

 ‘‘ನಮ್ಮ ಸಂಸ್ಥೆಯಲ್ಲಿ ಯಾವ ರೀತಿಯ ಸಂಶೋನೆ ನಡೆಯುತ್ತದೆ ಹಾಗೂ ಸಂಸ್ಥೆಯು ಹೇಗೆ ವೈರಸ್‌ಗಳನ್ನು ಮತ್ತು ಅವುಗಳ ಮಾದರಿಗಳನ್ನು ಸಂಗ್ರಹಿಸುತ್ತದೆ ಎಂಬ ವಿಷಯಗಳೆಲ್ಲವೂ ನಮಗೆ ತಿಳಿದಿರುತ್ತದೆ. ಈ ವೈರಸ್ ನಮ್ಮಿಂದ ಹರಡಿರುವುದು ಸಾಧ್ಯವೇ ಇಲ್ಲ’’ ಎಂದು ಹೇಳಿದ್ದಾರೆ.

‘‘ ಪ್ರಯೋಗಾಲಯದಲ್ಲಿ ನಾವು ಅತ್ಯಂತ ಕಟ್ಟುನಿಟ್ಟಾದ ನಿಯಾಮವಳಿಗಳನ್ನು ಅನುಸರಿಸುತ್ತೇವೆ. ವೈರಸ್‌ಗಳ ಸಂಶೋಧನೆಗೆ ಸಂಬಂಧಿಸಿ ನೀತಿ ಸಂಹಿತೆಯನ್ನು ಹೊಂದಿದ್ದೇವೆ’’ ಎಂದವರು ತಿಳಿಸಿದರು.

 ಕೊರೋನ ವೈರಸ್ ವುಹಾನ್‌ನ ಪ್ರಯೋಗಾಲಯದಿಂದ ಹರಡಿದೆ ಎಂಬ ಅಮೆರಿಕದ ಆರೋಪಗಳನ್ನು ಪ್ರಸ್ತಾಪಿಸಿದ ಯುವಾನ್, ಕೆಲವರು ಯಾವುದೇ ಪುರಾವೆ ಅಥವಾ ತಿಳುವಳಿಕೆ ಇಲ್ಲದೆ ಇಂತಹ ಆರೋಪಗಳನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ ಎಂದರು.

‘‘ ಈ ಎಲ್ಲಾ ಆರೋಪಗಳು ಊಹಾಪೋಹಗಳನ್ನು ಆಧರಿಸಿದ್ದಾಗಿದೆ. ಜನರನ್ನು ಗೊಂದಲಕ್ಕೀಡು ಮಾಡುವುದು ಹಾಗೂ ನಮ್ಮ ಸಾಂಕ್ರಾಮಿಕ ರೋಗ ವಿರೋಧಿ ಹಾಗೂ ವೈಜ್ಞಾನಿಕ ಚಟುವಟಿಕೆಗಳಿಗೆ ಹಸ್ತಕ್ಷೇಪ ಮಾಡುವುದೇ ಇದರ ಉದ್ದೇಶವಾಗಿದೆ ’’ ಎಂದವರು ಆರೋಪಿಸಿದರು.

ವೈರಸ್‌ನ್ನು ಮಾನವ ಸೃಷ್ಟಿಸಲು ಸಾಧ್ಯವಿಲ್ಲವೆಂದು ಹೇಳಿದ ಅವರು ಕೋವಿಡ್-19 ವೈರಸ್ ಕೃತಕ ಸೃಷ್ಟಿಯೆಂಬುದಕ್ಕೆ ಯಾವುದೇ ಪುರಾವೆ ಈ ತನಕ ಲಭ್ಯವಾಗಿಲ್ಲವೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News