ಲಾಕ್‌ಡೌನ್ ವಿರುದ್ಧ ಅಮೆರಿಕದ ವಿವಿಧೆಡೆ ಪ್ರತಿಭಟನೆ
ವಾಶಿಂಗ್ಟನ್,ಎ.19: ಕೊರೋನಾ ವೈರಸ್ ಅಟ್ಟಹಾಸ ನಿಯಂತ್ರಿಸಲು ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್ ವಿರೋಧಿಸಿ ಅಮೆರಿಕದ ಹಲವೆಡೆ ಪ್ರತಿಭಟನೆಗಳು ನಡೆದಿರುವ ಬಗ್ಗೆ ವರದಿಯಾಗಿವೆ. ಅಮೆರಿಕದ ವಿವಿಧ ನಗರಗಳಲ್ಲಿ ಕ್ವಾರಂಟೈನ್ ಹಾಗೂ ಲಾಕ್‌ಡೌನ್ ವಿರೋಧಿಸಿ ಶನಿವಾರ ನೂರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ನ್ಯೂಹ್ಯಾಂಪ್‌ಶೈರ್ ರಾಜ್ಯದ ಕಾಂಕರ್ಡ್ ನಗರದಲ್ಲಿ 400ಕ್ಕೂ ಅಧಿಕ ಮಂದಿ ಬೀದಿಗಳಲ್ಲಿ ಜಮಾಯಿಸಿ, ಪ್ರತಿಭಟನೆ ನಡೆಸಿದ್ದಾರೆ. ತಮ್ಮ ರಾಜ್ಯದಲ್ಲಿ ಕೊರೋನಾ ಹಾವಳಿ ಅತ್ಯಂತ ಕಡಿಮೆಯಿದ್ದು, ಲಾಕ್‌ಡೌನ್ ಹೇರಿಕೆ ಅನಗತ್ಯವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಕಾರರಲ್ಲಿ ಹಲವಾರು ಮಂದಿ ಮಿಲಟರಿ ಮಾದರಿ ಸಮವಸ್ತ್ರಗಳನ್ನು ಧರಿಸಿದ್ದು, ಮುಖವನ್ನು ಮುಚ್ಚಿಕೊಂಡಿದ್ದರು. ಆದಾಗ್ಯೂನ್ಯೂಹ್ಯಾಂಪ್‌ಶೈರ್‌ನಲ್ಲಿ ಶುಕ್ರವಾರ ಬೆಳಗ್ಗೆಯಿಂದೀಚೆಗೆ 1287 ಸೋಂಕಿನ ಪ್ರಕರಣಗಳು ದೃಢಪಟ್ಟಿವೆ ಹಾಗೂ 37 ಮಂದಿ ಮೃತಪಟ್ಟಿದ್ದಾರೆ. ಮೇರಿಲ್ಯಾಂಡ್‌ನಲ್ಲಿ 200 ಮಂದಿ ಹಾಗೂ ಟೆಕಕ್ಸಾಸ್‌ನಲ್ಲಿ 250ಕ್ಕೂ ಅಧಿಕ ಮಂದಿ ಲಾಕ್‌ಡೌನ್ ನಿರ್ಬಂಧಗಳ ವಿರುದ್ಧ ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.
ಮೇರಿಲ್ಯಾಂಡ್‌ನಲ್ಲಿ ಕಾರುಗಳಲ್ಲೇ ಕುಳಿತುಕೊಂಡು ರ್ಯಾಲಿ ನಡೆಸಿದ ಪ್ರತಿಭಟನಕಾರರು, ‘‘ಬಡತನ ಕೂಡಾ ಜನರನ್ನು ಕೊಲ್ಲುತ್ತದೆ’’ ಎಂಬ ಘೋಷಣೆಗಳನ್ನು ಬರೆದಿರುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.