ರೈತರ ಉತ್ಪನ್ನಗಳ ಖರೀದಿಗೆ ವಿಧಿಸುವ ತೆರಿಗೆ ಒಂದು ವರ್ಷಕ್ಕೆ ಕೈಬಿಡಲು ಆಗ್ರಹ
ಉಡುಪಿ, ಎ.20: ಕೊರೋನ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲೆಯಾದ್ಯಂತ ವಿಧಿಸಲಾಗಿರುವ ಲಾಕ್‌ಡೌನ್‌ನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ರೈತರ ಉತ್ಪನ್ನಗಳ ಖರೀದಿಗೆ ಎಪಿಎಂಸಿ ವಿಧಿಸುತ್ತಿರುವ ಶೇ.1.5 ತೆರಿಗೆಯನ್ನು ಕನಿಷ್ಠ ಒಂದು ವರ್ಷದ ಅವಧಿಗೆ ಕೈಬಿಡುವಂತೆ ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದೆ.
ಈಗಾಗಲೇ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಸಂಕಷ್ಟದಲ್ಲಿರುವ ರೈತರ ಸಮಸ್ಯೆಯ ಪರಿಹಾರಕ್ಕಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಅನಾನಾಸು, ಕಲ್ಲಂಗಡಿ, ಪಪ್ಪಾಯ, ಮಾವು, ಮೊದಲಾದ ಹಣ್ಣು ಹಾಗೂ ತರಕಾರಿಗಳ ಮಾರಾಟ ಮತ್ತು ಸಾಗಾಟಕ್ಕೆ ಸಾಧ್ಯವಾದ ಎಲ್ಲಾ ಪ್ರಯತ್ನ ಹಾಗೂ ವ್ಯೆವಸ್ಥೆಯನ್ನು ಮಾಡಿಕೊಟ್ಟಿದೆ. ಇದರ ಪರಿಣಾಮವಾಗಿ, ಗದ್ದೆಯಲ್ಲೇ ಹಾಳಾಗುತ್ತಿದ್ದ ಅನೇಕ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಲಭಿಸಿ, ಸ್ವಲ್ಪ ಮಟ್ಟಿನ ಆದಾಯವೂ ಸಿಗುವಂತಾಗಿದೆ. ಆ ಕಾರಣಕ್ಕೆ ರೈತರು ಜಿಲ್ಲಾಡಳಿತಕ್ಕೆ ಕೃತಜ್ಞರಾಗಿದ್ದಾರೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಗ್ರಾಮೀಣ ಭಾಗದ ಮಧ್ಯಮ ಹಾಗೂ ಬಡ ರೈತ ಕುಟುಂಬಗಳು ಕಳೆದ 25 ದಿನಗಳಿಂದ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟಮಾಡಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಬಗ್ಗೆ ಮನವಿ ಮಾಡಿದಾಗ ಅದಕ್ಕೂ ತಕ್ಷಣ ಸ್ಪಂಧಿಸಿ ಜಿಲ್ಲೆಯಾದ್ಯಂತ ಕೃಷಿ ಉತ್ಪನ್ನಗಳ ಖರೀದಿಗೆ, ಸಾಗಾಟಕ್ಕೆ ಹಾಗೂ ಕೃಷಿ ಚಟುವಟಿಕೆ ನಡೆಸಲು ಶರ್ತುಬದ್ದ ಅನುಮತಿಯನ್ನು ನೀಡಿದ್ದೀರಿ.
ಆದರೆ ಜಿಲ್ಲೆಯಲ್ಲಿ ಕೃಷಿ ಉತ್ಪನ್ನಗಳ ವ್ಯಾಪಾರ ಮಳಿಗೆ, ಅಕ್ಕಿ-ಎಣ್ಣೆ ಮಿಲ್ಲುಗಳು ಹಾಗೂ ಗೇರುಬೀಜ ಕಾರ್ಖಾನೆಗಳ ಮೂಲಕ ಖರೀದಿಸಲಾ ಗುವ ಭತ್ತ, ಕೊಬ್ಬರಿ, ತೆಂಗಿನ ಕಾಯಿ, ಅಡಿಕೆ, ನೆಲಗಡಲೆ, ಕಾಳುಮೆಣಸು, ಗೇರುಬೀಜ, ಕಾಡು ಉತ್ಪತ್ತಿ ಮೊದಲಾದ ರೈತರ ಎಲ್ಲಾ ಉತ್ಪನ್ನಗಳ ಮೇಲೆ ಎಪಿಎಂಸಿ ಶೇ. 1.5ರಷ್ಟು ತನ್ನ ಸೇವಾ ತೆರಿಗೆಯನ್ನು ವಿಧಿಸುತ್ತದೆ. ಖರೀದಿ ಎಪಿಎಂಸಿ ಯಾರ್ಡ್‌ನ ಒಳಗೆ ನಡೆಯಲೀ ಅಥವಾ ಜಿಲ್ಲೆಯ ಯಾವ ಭಾಗದಲ್ಲಿಯೇ ನಡೆಯಲಿ ಈ ತೆರಿಗೆಯನ್ನು ವಿಧಿಸಲಾಗುತ್ತದೆ. ಕೆಲವೊಮ್ಮೆ ಎಪಿಎಂಸಿ ನಿಯೋಜಿತ ಸ್ಕ್ವಾಡ್‌ಗಳು, ರೈತರು ತಮ್ಮ ಉತ್ಪನ್ನಗಳನ್ನು ಸಾಗಾಟ ಮಾಡುತ್ತಿ ವಾಗಲೇ ಅಡ್ಡಗಟ್ಟಿ ತೆರಿಗೆ ವಸೂಲಿ ಮಾಡಿದ್ದೂ ಇದೆ ಎಂದು ಕಿಸಾನ್ ಸಂಘ ಮನವಿಯಲ್ಲಿ ವಿವರಿಸಿದೆ.
ಒಟ್ಟಾರೆಯಾಗಿ ರೈತರಿಂದ ನೇರವಾಗಿ ತೆಗೆದುಕೊಳ್ಳದಿದ್ದರೂ, ಖರೀದಿಸು ವವರಿಗೆ ಕಡ್ಡಾಯಗೊಳಿಸಿ ತೆರಿಗೆಯನ್ನು ವಸೂಲಿ ಮಾಡುತ್ತಿರುವ ಕಾರಣ, ಆ ತೆರಿಗೆಯನ್ನು ಉತ್ಪನ್ನಗಳ ಬೆಲೆಯಿಂದಲೇ ಕಡಿತಗೊಳಿಸಿ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಸಿಗುವ ಉತ್ಪನ್ನಗಳ ಬೆಲೆಯಲ್ಲಿ ಕಡಿಮೆಯಾಗುತ್ತದೆ. ಅಲ್ಲದೆ ಈ ತೆರಿಗೆ ಹಣವನ್ನು ಎಪಿಎಂಸಿ ತನ್ನ ವ್ಯವಸ್ಥೆಗೆ ಬಳಸಿಕೊಳ್ಳುತ್ತದೆ ಹೊರತು ಸರಕಾರದ ಬೊಕ್ಕಸಕ್ಕೆ ಹೋಗುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಹಾಗೂ ದೇಶದಾದ್ಯಂತ ಉಂಟಾಗಿರುವ ಆರ್ಥಿಕ ಹಿನ್ನೆಡೆಯನ್ನು ಪರಿಗಣಿಸಿ, ಕನಿಷ್ಠ ಒಂದು ವರ್ಷದ ಅವಧಿಗಾದರೂ, ಜಿಲ್ಲೆಯಾದ್ಯಂತ ಎಪಿಎಂಸಿ ಕೃಷಿ ಉತ್ಪನ್ನಗಳ ಖರೀದಿಗೆ ವಿಧಿಸುತ್ತಿರುವ ಶೇ.1.5 ತೆರಿಗೆಯನ್ನು ಕೈಬಿಡುವಂತೆ ಆದೇಶಿಸ ಬೇಕೆಂದು ಉಡುಪಿ ಜಿಲ್ಲಾ ಭಾಕಿಸಂನ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.