×
Ad

109 ನಾಡದೋಣಿಗಳಿಗೆ ಸಿಕ್ಕಿದ್ದು 6167 ಕೆಜಿ ಮೀನು !

Update: 2020-04-20 19:58 IST

ಮಂಗಳೂರು, ಎ.20: ಲಾಕ್‌ಡೌನ್‌ನ ನಡುವೆಯೂ ದ.ಕ. ಜಿಲ್ಲೆಯಲ್ಲಿ ನಾಡದೋಣಿ ಮೀನುಗಾರಿಕೆಗೆ ಸದ್ಯ ಅವಕಾಶ ನೀಡಲಾಗಿದೆ. ಹಾಗಾಗಿ ಕಡಲ ತೀರ ಪ್ರದೇಶದ ಮೀನುಗಾರರು ತಮ್ಮ ನಾಡದೋಣಿಗಳ ಮೂಲಕ ಮೀನುಗಾರಿಕೆ ನಡೆಸುತ್ತಿದ್ದಾರೆ. ಆದರೆ ಅವರ ಬಲೆಗೆ ಬೀಳುತ್ತಿರುವ ಮೀನುಗಳು ಮಾತ್ರ ಅಲ್ಪಸ್ವಲ್ಪ !

ಇಂದು ಜಿಲ್ಲೆಯ ವಿವಿಧ ಕಡೆ ಕಡಲಿಗಿಳಿದಿದ್ದ 109 ನಾಡದೋಣಿಗಳ ಬಲೆಗೆ ಬಿದ್ದ ಮೀನಿನ ಪ್ರಮಾಣ 6167 ಕೆಜಿ ಮಾತ್ರ. ಇದು ಮೀನುಗಾರಿಕಾ ಇಲಾಖೆಯ ಅಧಿಕೃತ ಮಾಹಿತಿ.

ನಾಡದೋಣಿಗಳಲ್ಲಿ ಮೀನುಗಾರರು ಸುಮಾರು ಒಂದೆರಡು ಕಿ.ಮೀ. ವ್ಯಾಪ್ತಿಯೊಳಗಡೆ ಮಾತ್ರವೇ ಮೀನುಗಾರಿಕೆ ನಡೆಸಬಹುದಾಗಿದೆ. ಬಿಸಿಲಿನ ತಾಪ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಸಮುದ್ರ ನೀರಿನ ಮೇಲ್ಮೈ ಕೂಡಾ ಬಿಸಿಯಾಗುತ್ತದೆ. ಹಾಗಾಗಿ ಮೀನುಗಳು ಕೂಡಾ ಈ ಸಂದರ್ಭದಲ್ಲಿ ವಲಸೆ ಹೋಗುವುದೇ ಹೆಚ್ಚು. ಇದರಿಂದಾಗಿ ಬಲೆಗಳಿಗೆ ಮೀನು ಸಿಗುತ್ತಿಲ್ಲ ಎಂಬುದು ಮೀನುಗಾರರ ಅಭಿಪ್ರಾಯ.
ಬೈಕಂಪಾಡಿ, ಸಸಿಹಿತ್ಲು, ಹೊಯಿಗೆಬಜಾರ್, ಉಳ್ಳಾಲ ಕೋಡಿ, ಕೋಟೆಪುರ, ಮೊಗವೀರಪಟ್ಣ, ಉಚ್ಚಿಲ- ಸೋಮೇಶ್ವರ ಮೊದಲಾದ ಕಡೆ ಮೀನುಗಾರರು ನಾಡದೋಣಿಗಳಲ್ಲಿ ಮೀನು ಬೇಟೆಯಾಡಿ ತಂದು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಸಿಗುತ್ತಿರುವ ಮೀನಿನ ಪ್ರಮಾಣ ಅತೀ ಕಡಿಮೆಯಾಗಿದ್ದರೂ, ಬೆಲೆ ಮಾತ್ರ ದುಬಾರಿ, ಬಂಗುಡೆ, ಕೊಡ್ಡೆಯಿ, ಸ್ವಾಡಿ ಮೊದಲಾದ ಮೀನುಗಳು ಸಿಗುತ್ತಿವೆ.

ತಾಪಮಾನ ತೀವ್ರ- ಮೀನು ಕೊರತೆ

‘‘ಕಡಲಿನ ನೀರು ತಾಪಮಾನದಿಂದಾಗಿ ಬಿಸಿಯಾಗಿದೆ. ಹಾಗಾಗಿ ನಾಡದೋಣಿಗಳಲ್ಲಿ ಬಲೆಗೆ ಮೀನೇ ಸಿಗುತ್ತಿಲ್ಲ. ಮೊಗವೀರ ಪಟ್ಣದ ಬಳಿಯಿಂದ ಇಂದು 10ಕ್ಕೂ ಅಧಿಕ ದೋಣಿಗಳು ಕಡಲಿಗಿಳಿದಿದ್ದವು. ಆದರೆ ಮೀನು ದೊರಕಿದ್ದು, ಕೆಲ ಕೆಜಿಗಳಷ್ಟು ಮಾತ್ರ. ಬೇಡಿಕೆ ಮಾತ್ರ ತುಂಬಾನೆ ಇದೆ’’ ಎಂದು ಆ ಭಾಗದ ಮೀನುಗಾರರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News