ಕೊರೋನಗೆ ಬಂಟ್ವಾಳದ ಮಹಿಳೆ ಬಲಿ ಹಿನ್ನೆಲೆ: ವೈದ್ಯರ ಸಹಿತ 34 ಮಂದಿಗೆ ಕ್ವಾರಂಟೈನ್
ಬಂಟ್ವಾಳ, ಎ.20: ಕೋವಿಡ್ - 19 (ಕೊರೋನ) ವೈರಸ್ ಸೋಂಕಿನಿಂದ ಬಂಟ್ವಾಳದ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬ, ಸಂಪರ್ಕದಲ್ಲಿದ್ದವರು, ವೈದ್ಯರ ಸಹಿತ ಒಟ್ಟು 34 ಮಂದಿಯನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ.
ಮೃತ ಮಹಿಳೆಯ ಪತಿ, ಇಬ್ಬರು ಮಕ್ಕಳು, ಸಂಪರ್ಕದಲ್ಲಿದ ಸಂಬಂಧಿಕರು ಹಾಗೂ ಸುತ್ತಮುತ್ತಲಿನ ಮನೆಯವರು ಸೇರಿದಂತೆ 28 ಮಂದಿ ಹಾಗೂ ಮಹಿಳೆಯ ಆರೋಗ್ಯ ತಪಾಸನೆ ನಡೆಸಿದ್ದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಸೇರಿ 6 ಮಂದಿ ಹೀಗೆ ಒಟ್ಟು 34 ಮಂದಿಯನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಅವರ ಗಂಟಲ ದ್ರಾವ ಮಾದರಿಯನ್ನು ತೆಗೆದು ಕೋವಿಡ್ - 19 ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ಮೃತ ಮಹಿಳೆಯ ಸುತ್ತಮುತ್ತಲಿನ ಮನೆಯವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಮಹಿಳೆಯ ಮನೆಯ ಸುತ್ತಲಿನ 100 ಮೀಟರ್ ವ್ಯಾಪ್ತಿಯ ಎಲ್ಲಾ ಮನೆಯವರ ಆರೋಗ್ಯ ತಪಾಸನಾ ಕಾರ್ಯ ಸೋಮವಾರದಿಂದ ಆರಂಭವಾಗಿದೆ.
ಅಧಿಕಾರಿಗಳ ಸಭೆ: ಕೊರೋನ ಸೋಂಕಿಗೆ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಸಭಾಂಗಣದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಸೋಮವಾರ ನಡೆಯಿತು.
ಸೀಲ್‍ಡೌನ್ ಆಗಿರುವ ಬಂಟ್ವಾಳ ಪೇಟೆಯ ಜನರಿಗೆ ಆಹಾರ ಸಾಮಗ್ರಿ, ಔಷಧ, ದಿನ ಬಳಕೆಯ ವಸ್ತುಗಳ ಸಹಿತ ಮೂಲಭೂತ ಸೌಕರ್ಯ ಕಲ್ಪಿಸಲು ಶಾಸಕರ ವಾರ್‍ರೂಂ ಹಾಗೂ ತಾಲೂಕು ಆಡಳಿತ ವ್ಯವಸ್ಥೆ ಮಾಡಲಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಪ್ರತೀ ಜನರ ಮಾಹಿತಿ ಸಂಗ್ರಹಿಸುವುದು ಹಾಗೂ ಜನರ ಆರೋಗ್ಯದ ಮೇಲೆ ನಿಗಾ ವಹಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್., ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ರಾಜೇಶ್, ತಾಲೂಕು ವೈದ್ಯಾಧಿಕಾರಿ, ದೀಪಾ ಪ್ರಭು, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಡಿವೈಎಸ್ಪಿ ವೆಲೆಟೈನ್ ಡಿಸೋಜ, ತಾಲೂಕು ಪಂಚಾಯತ್ ಇಒ ರಾಜಣ್ಣ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.