ಲಾಕ್‍ಡೌನ್ : ನೆರವಿನ ಸಹಾಯ ಹಸ್ತ ಚಾಚಿದ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು
ಮಂಗಳೂರು : ಕೊರೋನ ವೈರಸ್ ಮಹಾಮಾರಿಯಿಂದಾಗಿ ರಾಷ್ಟ್ರವ್ಯಾಪಿ ಲಾಕ್‍ಡೌನ್ ಆಗಿರುವ ಸಮಯದಲ್ಲಿ ಸ್ಥಳೀಯರಿಗೆ ಸಹಾಯ ಮಾಡುವ ಉದ್ದೇಶದಿಂದ, ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‍ಜೆಇಸಿ) ವತಿಯಿಂದ ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗಳನ್ನು ಒಳಗೊಂಡಿರುವ ಕಿಟ್‍ಗಳನ್ನು ನೀರುಮಾರ್ಗ ಮತ್ತು ವಾಮಂಜೂರು ಪ್ರದೇಶದ ಕುಟುಂಬಗಳಿಗೆ ವಿತರಿಸಲಾಯಿತು.
ಈ ಅಭಿಯಾನದ ಭಾಗವಾಗಿ, ರಾಷ್ಟ್ರವ್ಯಾಪಿ ಲಾಕ್‍ಡೌನ್‍ನಿಂದ ಹೆಚ್ಚು ತೊಂದರೆಗೊಳಗಾದ ಕುಟುಂಬಗಳ ಜನರಿಗೆ ವಿತರಣೆಗಾಗಿ ಕಿಟ್‍ಗಳನ್ನು ಕಾಲೇಜು ನೀರುಮಾರ್ಗ ಗ್ರಾಮ ಪಂಚಾಯತ್‍ಗೆ ಹಸ್ತಾಂತರಿಸಿತು.
ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಪರವಾಗಿ, ಕಾಲೇಜಿನ ಸಹಾಯಕ ನಿರ್ದೇಶಕರಾದ ವಂ. ರೋಹಿತ್ ಡಿ'ಕೋಸ್ಟಾ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತ್‍ನ ಇತರ ಸದಸ್ಯರ ಸಮ್ಮುಖದಲ್ಲಿ ಕಿಟ್‍ಗಳನ್ನು ನೀರುಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ನೀರುಮಾರ್ಗದ ಸುತ್ತಮುತ್ತಲಿನ ಬಡ ಕುಟುಂಬಗಳ ಅಗತ್ಯತೆಗಳನ್ನು ಪೂರೈಸುವಲ್ಲಿ ಕಿಟ್‍ಗಳು ಬಹಳ ಉಪಯುಕ್ತ ಎಂದು ಗ್ರಾಮ ಪಂಚಾಯಿತಿಯ ಪ್ರತಿನಿಧಿಗಳು ಹೇಳಿದರು. ಜೊತೆಗೆ ಇಂತಹ ಸಮಯದಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದೆ ಬಂದ ಕಾಲೇಜಿನ ಆಡಳಿತಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ತಿಂಗಳ ಆರಂಭದಲ್ಲಿ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2,25,000 ರೂ. ಮೊತ್ತವನ್ನು ತನ್ನ ಕೊಡುಗೆಯಾಗಿ ನೀಡಿತ್ತು.