×
Ad

ಎ. 21ರಿಂದ ಬಂಟ್ವಾಳ ಪೇಟೆಯ 500 ಮೀಟರ್ ಮಾತ್ರ ಸೀಲ್‍ಡೌನ್

Update: 2020-04-20 21:38 IST

ಬಂಟ್ವಾಳ, ಎ.20: ಕೋವಿಡ್ - 19 (ಕೊರೋನ) ವೈರಸ್ ಸೋಂಕಿಗೆ ಬಲಿಯಾದ ಬಂಟ್ವಾಳದ ಮಹಿಳೆಯ ಮನೆಯ ಸುತ್ತಮುತ್ತಲಿನ 500 ಮೀಟರ್ ಪ್ರದೇಶಗಳು ಮಾತ್ರ ಮಂಗಳವಾರದಿಂದ ಸೀಲ್‍ಡೌನ್ ಆಗಿರಲಿದೆ. ಉಳಿದ ಬಂಟ್ವಾಳ ಪೇಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಾಕ್‍ಡೌನ್ ಜಾರಿಯಲ್ಲಿರುತ್ತದೆ.

ಮೃತ ಮಹಿಳೆಯ ಮನೆಯಿಂದ 500 ಮೀಟರ್ ಅಂದರೆ ಬಂಟ್ವಾಳ ಪುರಸಭಾ ಕಚೇರಿ ಕಟ್ಟಡದಿಂದ ಬಡ್ಡಕಟ್ಟೆವರೆಗೆ ಸೀಲ್‍ಡೌನ್ ಆಗಿರಲಿದೆ. ಬಂಟ್ವಾಳ ಪೇಟೆಗೆ ಸಂಪರ್ಕ ಕಲ್ಪಿಸುವ ನೆರೆ ಪರಿಹಾರ ರಸ್ತೆ ಸಹಿತ ಪುರಸಭಾ ಕಚೇರಿಯಿಂದ ಹಾಗೂ ಬಡ್ಡಕಟ್ಟೆಯಿಂದ ಬಂಟ್ವಾಳ ಪೇಟೆಗೆ ಹೋಗುವ ರಸ್ತೆ ಸಂಪೂರ್ಣ ಬಂದ್ ಆಗಿದೆ.

ಬಂಟ್ವಾಳ ಕೆಳಗಿನ ಪೇಟೆ, ಜಕ್ರಿಬೆಟ್ಟು, ಬೈಪಾಸ್ ರಸ್ತೆ, ಬೈಪಾಸ್ ಮೂಲಕ ಬೆಳ್ತಂಗಡಿ, ಮೂಡಬಿದ್ರೆಗೆ ಹೋಗುವ ರಸ್ತೆಗಳು ಸೀಲ್‍ಡೌನ್ ವ್ಯಾಪ್ತಿಯಿಂದ ಮುಕ್ತವಾಗಲಿದೆ. ಇಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಂಗಡಿಗಳು ತೆರೆದಿರುತ್ತದೆ. ಆದರೆ ಅಗತ್ಯ ವಸ್ತುಗಳನ್ನು ಹೊರೆತು ಪಡಿಸಿ ಯಾರೂ ಮನೆಯಿಂದ ಹೊರ ಬರುವಂತಿಲ್ಲ. ಅಲ್ಲದೆ ಲಾಕ್‍ಡೌನ್‍ನ ಎಲ್ಲಾ ನಿಯಮಗಳು ಜಾರಿಯಲ್ಲಿರುತ್ತದೆ. 

ಸೋಮವಾರ ಬಂಟ್ವಾಳ ಪೇಟೆಯ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರಿಂದ ಯಾರೂ ಮನೆಯಿಂದ ಹೊರ ಬಂದಿರಲಿಲ್ಲ. ಈ ಪ್ರದೇಶಗಳ ರಸ್ತೆಗಳಲ್ಲಿ ತುರ್ತು ವಾಹನಗಳನ್ನು ಹೊರೆತು ಪಡಿಸಿ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.

ಬಂಟ್ವಾಳ ಪೇಟೆಗೆ ಸಂಪರ್ಕ ಕಲ್ಪಿಸುವ ಕೆಲವು ರಸ್ತೆಗಳನ್ನು ಮಣ್ಣು ಹಾಕಿ ಮುಚ್ಚಲಾಗಿತ್ತು. ಅಧಿಕಾರಿಗಳ ಮುಂದಿನ ಆದೇಶದವರೆಗೆ ಬಂಟ್ವಾಳ ಪೇಟೆ ಸಂಪೂರ್ಣ ಸೀಲ್‍ಡೌನ್ ಆಗಿರಲಿದೆ. ಸೀಲ್‍ಡೌನ್ ಆದ ಪ್ರದೇಶಗಳ ಮನೆಗಳಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆ ನಡೆಯುತ್ತಿದೆ.

ಬಂಟ್ವಾಳ ಮಸೀದಿಯ ಮೈಕ್‍ನಲ್ಲಿ ಜಾಗೃತಿ

ಕೊರೋನ ಸೋಂಕಿಗೆ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಬಂಟ್ವಾಳ ಕೆಳಗಿನ ಪೇಟೆಯ ಮೈಕ್‍ನಲ್ಲಿ ಜನರು ಜಾಗೃತಿ ವಹಿಸುವಂತೆ ಸೋಮವಾರ ಘೋಷಣೆ ಮಾಡಲಾಗಿದೆ. ಮೃತ ಮಹಿಳೆಯ ಮನೆ ಇರುವ ಬಂಟ್ವಾಳ ಪೇಟೆಯ ಸುತ್ತಮುತ್ತಲ 5 ಕಿಲೋ ಮೀಟರ್ ಪ್ರದೇಶವನ್ನು ಮೂರು ಝೋನ್‍ಗಳಾ ವಿಂಗಡಿಸಲಾಗಿದ್ದು ಬಂಟ್ವಾಳ ಕೆಳಗಿನ ಪೇಟೆ ಇನ್ನರ್ ಬಫರ್ ಝೋನ್ ವ್ಯಾಪ್ತಿಗೆ ಬರುತ್ತದೆ. ಈ ಪ್ರದೇಶದ ಪ್ರತೀ ಮನೆಗೆ ಆಶಾ ಕಾರ್ಯಕರ್ತರು ಭೇಟಿ ನೀಡಿ ಮನೆಮಂದಿಯ ಆರೋಗ್ಯದ ಮಾಹಿತಿ ಪಡೆಯಲಿದ್ದಾರೆ. ಅವರಿಗೆ ಮಾಹಿತಿ ನೀಡುವ ಮೂಲಕ ಸಹಕರಿಸುವಂತೆ ಸ್ಥಳೀಯ ಪುರಸಭಾ ಸದಸ್ಯ ಮುನೀಶ್ ಅಲಿ ಮಸೀದಿಯ ಮೈಕ್‍ನಲ್ಲಿ ಘೋಷಣೆ ಮಾಡುವ ಮೂಲಕ ಮನವಿ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News