‘ವಾರಿಯರ್ ಆಫ್ ದಿ ಡೇ’ ಆಗಿ ನಯನಾ ಆಯ್ಕೆ
ಮಂಗಳೂರು, ಎ.20: ಕೊರೋನ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಸಂದರ್ಭ ಉತ್ತಮವಾಗಿ ಕಾರ್ಯನಿರ್ವಹಿಸಿದ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರು ದಿನದ ಕೊವಿಡ್ ವಾರಿಯರ್ ಎಂದು ಗೌರವಿಸಲಿದ್ದಾರೆ. ಅದರಂತೆ ಸೋಮವಾರದ ‘ವಾರಿಯರ್ ಆಫ್ ದಿ ಡೇ’ ಆಗಿ ಪಾಂಡೇಶ್ವರ ಠಾಣೆಯ ಎಚ್‌ಸಿ ನಯನಾ ಆಯ್ಕೆಯಾಗಿದ್ದಾರೆ.
ನಯನಾ ಅವರು ವೆನ್ಲಾಕ್ ಆಸ್ಪತ್ರೆಯ ಕೋವಿಡ್-19ನ ವಿಶೇಷ ಕಟ್ಟಡ ಆಯುಷ್ ಬಿಲ್ಡಿಂಗ್‌ನ ಬಂದೋಬಸ್ತ್ ಕರ್ತವ್ಯವನ್ನು ಸ್ವಇಚ್ಛೆಯಿಂದ ನಿರ್ವಹಿಸುತ್ತಿದ್ದಾರೆ. ಕರ್ತವ್ಯದ ವೇಳೆ ಇವರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಹಾಗೂ ಚಿಕಿತ್ಸೆ ಪಡೆದು ಗುಣಮುಖಗೊಂಡು ಬಿಡುಗಡೆ ಹೊಂದಿರುವವರ ಸ್ವ-ವಿವರವುಳ್ಳ ಮಾಹಿತಿಯನ್ನು ಆಸ್ಪತ್ರೆಯಿಂದ ಪಡೆದು ಕ್ಲಿಪ್ತ ಸಮಯದಲ್ಲಿ ಸಂಬಂದಪಟ್ಟ ಪೊಲೀಸ್ ಠಾಣೆಗಳಿಗೆ ನಿಗಾವಹಿಸಲು ಹಾಗೂ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡುವಲ್ಲಿ ಉತ್ತಮ ಕೆಲಸ ಮಾಡಿರುತ್ತಾರೆ. ಆಸ್ಪತ್ರೆಯ ವೈದ್ಯರೊಂದಿಗೆ ಹಾಗೂ ಸಿಬ್ಬಂದಿ ವರ್ಗದ ಜೊತೆ ಉತ್ತಮ ಒಡನಾಟವಿದ್ದು ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್-19 ಚಿಕಿತ್ಸೆಗೆ ಮೀಸಲಿರಿಸಿದ್ದರಿಂದ, ಇತರ ಖಾಯಿಲೆಯ ಚಿಕಿತ್ಸೆಗೆಂದು ಬರುವ ರೋಗಿಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಿ ವೈದ್ಯರ ಸೂಚನೆಯಂತೆ ಬೇರೆ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಸಂಪರ್ಕಿಸುವ ಕುರಿತು ಸಲಹೆ ನೀಡುವ ಮೂಲಕ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.