ಗಂಜಿಮಠ : ಲಾಕ್‌ಡೌನ್ ಉಲ್ಲಂಘಿಸಿ ತೆರೆದುಕೊಂಡ ಬಿಗ್‌ಬ್ಯಾಗ್ಸ್ ಕಂಪೆನಿ
ಗುರುಪುರ, ಎ.20 : ಮಂಗಳೂರು ತಾಲೂಕಿನ ಗಂಜಿಮಠದ ಕೈಗಾರಿಕಾ ಪ್ರದೇಶದಲ್ಲಿರುವ ‘ಬಿಗ್‌ಬ್ಯಾಗ್ಸ್’ ಇಂಟರ್‌ನ್ಯಾಶನಲ್ ಕಂಪೆನಿ ಕಾರ್ಯಾಚರಿಸಲು ಸೋಮವಾರ ಸ್ಥಳೀಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಅನುಮತಿ ನೀಡಿರುವುದರ ವಿರುದ್ಧ ಪರಿಸರವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಲೂ ‘ಕೆಂಪು ವಲಯ’(ರೆಡ್ ಝೋನ್) ಎಂದೇ ಗುರುತಿಸಲ್ಪಟ್ಟ ಮಂಗಳೂರು ತಾಲೂಕಿನ ಗಂಜಿಮಠ ಸುತ್ತಲ ಪ್ರದೇಶದ ನಿವಾಸಿಗಳು ಕಳೆದೊಂಂದು ತಿಂಗಳಿಂದ ಕೆಲಸವಿಲ್ಲದೆ ಮನೆಯೊಳಗೆ ಲಾಕ್‌ಡೌನ್ ಆಗಿದ್ದರೂ ಕೂಡ ಹೊರಗಿಂದ ಬಂದು ಎರಡು ಪಾಳಿಯಲ್ಲಿ ಕೆಲಸ ಮಾಡುವ ಸುಮಾರು 3,000ರಷ್ಟು ಕಾರ್ಮಿಕರಿರುವ ಈ ಕಂಪೆನಿಗೆ ಅನುಮತಿ ನೀಡಿರುವುದು ಈಗ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ಲಾಕ್‌ಡೌನ್ ಅವಧಿಯಲ್ಲೇ ಎರಡು ಬಾರಿ ಕಂಪೆನಿ ತೆರೆಯಲು ಪ್ರಯತ್ನ ನಡೆದಿತ್ತು. ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುಪುರ-ಕೈಕಂಬದ(ನಾಡಕಚೇರಿ) ಉಪತಹಶೀಲ್ದಾರ್ ಶಿವಪ್ರಸಾದ್ ನೇತೃತ್ವದ ತಂಡವು ಕಂಪೆನಿ ವಿರುದ್ಧ ಕ್ರಮ ಕೈಗೊಂಡಿತ್ತು. ಆದಾಗ್ಯೂ ಸೋಮವಾರ ಮತ್ತೆ ಈ ಕಂಪೆನಿಯ ಕಾರ್ಯಾಚರಿಸತೊಡಗಿದೆ.
ಆ ಹಿನ್ನೆಲೆಯಲ್ಲಿ ಮಂಗಳೂರು ತಹಶೀಲ್ದಾರ್, ಉಪ ತಹಶೀಲ್ದಾರ್ ಮತ್ತಿತರ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಮಂಗಳೂರು ಸಹಾಯಕ ಆಯುಕ್ತರ ಆದೇಶದ ಮೇರೆಗೆ ಕಂಪೆನಿಯು ಕಾರ್ಯಾಚರಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಸಾವಿರಾರು ಕಾರ್ಮಿಕರಿರುವ ಈ ಕಂಪೆನಿಗೆ ಕೆಲಸ ಮಾಡಲು ಅನುಮತಿ ನೀಡಿರುವ ಹಿರಿಯ ಅಧಿಕಾರಿಗಳು ಬೈಕಂಪಾಡಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಏಳೆಂಟು ಕಾರ್ಮಿಕರಿರುವ ಸಣ್ಣಪುಟ್ಟ ಕೈಗಾರಿಕಾ ಘಟಕಗಳಿಗೆ ಅನುಮತಿ ನೀಡಬಹುದಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸ್ವತಃ ತಾನೇ ವಿಧಿಸಿದ ಕೆಲವು ನಿಯಮಾವಳಿಗಳನ್ನು ಉಲ್ಲಂಘಿಸಲಾಗುತ್ತಿದೆಯೇ ಎಂದೂ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಎ.15ರಂದು ಕೇಂದ್ರ ಸರಕಾರ ಹೊರಡಿಸಿದ ಪರಿಷ್ಕೃತ ನಿಯಮಾವಳಿಯಂತೆ ಗಂಜಿಮಠದ ಬಿಗ್‌ಬ್ಯಾಗ್ಸ್ ಕಂಪೆನಿ ಕಾರ್ಯಾಚರಿಸಲು ಆದೇಶ ನೀಡಲಾಗಿದೆ. ಅದಕ್ಕೂ ಕೆಲವು ಷರತ್ತು ವಿಧಿಸಲಾಗಿದೆ. ಅದರಂತೆ ಸೋಮವಾರ ಬಿಗ್‌ಬ್ಯಾಗ್ಸ್ ಕಂಪೆನಿಯು ತೆರೆದ ವೇಳೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಬಗ್ಗೆ ಮಾಹಿತಿ ಲಭಿಸಿದೆ. ವಸ್ತುಸ್ಥಿತಿ ಅರಿಯಲು ತಾನು ಮಂಗಳವಾರ ಖುದ್ದು ಸ್ಥಳಕ್ಕೆ ಭೇಟಿ ನೀಡಲಿದ್ದೇನೆ. ಆ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳುವೆ.
ಮದನ್ ಮೋಹನ್, ಸಹಾಯಕ ಆಯುಕ್ತರು
ಮಂಗಳೂರು ಉಪವಿಭಾಗ