ಲಾಕ್‌ಡೌನ್ ಮಧ್ಯೆ ಟೋಲ್ ಲೂಟಿ : ಹೋರಾಟ ಸಮಿತಿ ಆಕ್ರೋಶ
ಮಂಗಳೂರು, ಎ.20: ರಾಜ್ಯದಲ್ಲಿ ಲಾಕ್‌ಡೌನ್ ಯಾವುದೇ ವಿನಾಯತಿ ಇಲ್ಲದೆ ಮುಂದುವರಿದಿರುವ ನಡುವೆ ಟೋಲ್ಗೇಟ್‌ಗಳಲ್ಲಿ ಸುಂಕ ವಸೂಲಿಗೆ ಅವಕಾಶ ನೀಡಿರುವುದು ತಪ್ಪಾದ ನಡೆಯಾಗಿದೆ. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಸುರತ್ಕಲ್ ಅಕ್ರಮ ಟೋಲ್ ಗೇಟ್ ಸ್ಥಳೀಯ ಖಾಸಗಿ ವಾಹನಗಳಿಂದ ಬಲವಂತದ ಟೋಲ್ ವಸೂಲಿ ಆರಂಭಿಸಿದೆ. ಈ ಅಕ್ರಮ ವಸೂಲಿಯನ್ನು ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ತೀವ್ರವಾಗಿ ಖಂಡಿಸಿದ್ದು, ತಕ್ಷಣ ಜಿಲ್ಲಾಡಳಿತ ಸ್ಥಳೀಯ ವಾಹನಗಳ ಸುಂಕ ವಸೂಲಿಗೆ ತಡೆ ಹೇರಬೇಕು, ಇಲ್ಲದಿದ್ದಲ್ಲಿ ಲಾಕ್‌ಡೌನ್ ಉಲ್ಲಂಘಿಸಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.
ಅಗತ್ಯ ವಸ್ತು ಸಾಗಾಟದ, ತುರ್ತು ಸೇವೆಗಳ ವಾಹನಗಳು ಮಾತ್ರ ಓಡಾಡುವ ಸಂದರ್ಭ ಟೋಲ್ ವಸೂಲಿಗೆ ಅವಕಾಶ ಮಾಡಿಕೊಟ್ಟಿರುವುದು ಸರಿಯಾದ ನಿರ್ಧಾರವಲ್ಲ. ಸುರತ್ಕಲ್ ಟೋಲ್ ಗೇಟ್ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡು ನಾಲ್ಕು ವರ್ಷಗಳಿಂದ ಮುಂದುವರಿದಿದೆ. ಜನತೆಗೆ ನೀಡಿದ ಭರವಸೆಯಂತೆ ಟೋಲ್ಗೇಟ್ ಮುಚ್ಚಲು ಆಗ್ರಹಿಸಿ, ಹೋರಾಟ ಸಮಿತಿ ಹಲವು ಹಂತಗಳಲ್ಲಿ ತೀವ್ರವಾದ ಪ್ರತಿಭಟನೆ ನಡೆಸುತ್ತಾ ಬಂದಿದೆ. ಜನತೆಯ ಹೋರಾಟದ ತೀವ್ರತೆಯ ಪರಿಣಾಮ ಸುರತ್ಕಲ್ ತಾತ್ಕಾಲಿಕ ಟೋಲ್ಗೇಟ್ ತೆರವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀರ್ಮಾನ ಕೈಗೊಂಡು ಒಂದು ವರ್ಷ ದಾಟಿದೆ. ಈ ನಡುವೆ ಜನಪ್ರತಿನಿಧಿಗಳ ಬದ್ದತೆಯ ಕೊರತೆಯಿಂದ ಟೋಲ್ಗೇಟ್ ಅಕ್ರಮವಾಗಿ ಮುಂದುವರಿದಿದೆ. ಆದರೆ ಜನತೆಯ ಹೋರಾಟ ಸೃಷ್ಟಿಸಿರುವ ಒತ್ತಡದ ಪರಿಣಾಮ ಸ್ಥಳೀಯ ಖಾಸಗಿ ವಾಹನಗಳಿಗೆ ಟೋಲ್ ವಿನಾಯತಿ ನೀಡಲಾಗುತ್ತಿದೆ. ಈ ನಡುವೆ, ಲಾಕ್‌ಡೌನ್ ಸಂದರ್ಭ ದುರುಪಯೋಗಪಡಿಸಿ ಸ್ಥಳೀಯ ವಾಹನಗಳಿಂದ ಟೋಲ್ ವಸೂಲಿಯನ್ನು ಗುತ್ತಿಗೆದಾರರು ಆರಂಭಿಸಿರುತ್ತಾರೆ. ಈ ಕುರಿತು ಜಿಲ್ಲಾಡಳಿತಕ್ಕೆ ಮೌಖಿಕ ದೂರು ಸಲ್ಲಿಸಲಾಗಿದ್ದು, ಯಥಾಸ್ಥಿತಿ ಮುಂದುವರಿಸಲು ಆಗ್ರಹಿಸಲಾ ಗಿದೆ. ಇದನ್ನು ಮೀರಿ ಸ್ಥಳೀಯ ವಾಹನಗಳ ಸುಲಿಗೆಯನ್ನು ಟೋಲ್ ಗುತ್ತಿಗೆದಾರರು ಮುಂದುವರಿಸಿದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.