ಲಾಕ್‍ಡೌನ್‍ : ಅಂಗಡಿ, ಮನೆಗಳ ಲಕ್ಷಾಂತರ ರೂ. ಬಾಡಿಗೆ ಮನ್ನಾ ಮಾಡಿದ ಮುಹಮ್ಮದ್ ಹಸನ್

Update: 2020-04-21 14:30 GMT

ಬಂಟ್ವಾಳ, ಎ. 21: ಕೋವಿಡ್ - 19 (ಕೊರೋನ) ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಕೆಲವು ವ್ಯಕ್ತಿಗಳು ಹಾಗೂ ವಿವಿಧ ಸಂಘ - ಸಂಸ್ಥೆಗಳು ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ.

ಅನ್ನ, ನೀರು, ಆಹಾರ ಸಾಮಗ್ರಿಗಳನ್ನು ಒದಗಿಸುವುದು, ಈ ಗುಂಪಿಗೆ ಬಂಟ್ವಾಳ ತಾಲೂಕಿನ ಕಟ್ಟಡವೊಂದರ ಮಾಲಕ ಸೇರುತ್ತಾರೆ. ತನ್ನ ಕಟ್ಟದಲ್ಲಿರುವ ಎಲ್ಲಾ ಬಾಡಿಗೆದಾರರ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಇತರ ಕಟ್ಟಡ ಮಾಲಕರಿಗೆ ಮಾದರಿಯಾಗಿದ್ದಾರೆ.

ತಾಲೂಕಿನ ಬರಿಮಾರು ನಿವಾಸಿ ದಿ. ಹಸನಬ್ಬ ಎಂಬವರ ಪುತ್ರ ಮುಹಮ್ಮದ್ ಹಸನ್ ಅವರೇ ಈ ಕಟ್ಟಡ ಮಾಲಕ. ಪಾಣೆಮಂಗಳೂರು ಬೈಪಾಸ್ ರಸ್ತೆಯಲ್ಲಿರುವ ಬಿ.ಎಚ್.ಕಾಂಪ್ಲೆಕ್ಸ್ ಮಾಲಕರಾದ ಮುಹಮ್ಮದ್ ಹಸನ್ ತನ್ನ ಕಟ್ಟಡದಲ್ಲಿರುವ 12 ಮನೆಗಳು, 21 ಅಂಗಡಿಗಳ ಎಪ್ರಿಲ್ ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದಾರೆ.

ಬಿ.ಎಚ್.ಕಾಂಪ್ಲೆಕ್ಸ್ ನಲ್ಲಿರುವ 21 ಅಂಗಡಿಗಳಲ್ಲಿ  ಹೊಟೇಲ್, ಮೆಡಿಕಲ್,  ದಿನಸಿ ಸಾಮಗ್ರಿ, ಬೇಕರಿ, ತರಕಾರಿ, ಫ್ಯಾನ್ಸಿ, ಟ್ರಾವೆಲ್ ಏಜನ್ಸಿ, ಬ್ಯೂಟಿ ಪಾರ್ಲರ್, ಸಲೂನ್, ಕ್ರಿಶ್ಚಿಯನ್ ಪ್ರಾರ್ಥನಾ ಕೊಠಡಿ ಸೇರಿ ಒಟ್ಟು 21 ಅಂಗಡಿಗಳು ಇವೆ. ಅಲ್ಲದೆ 12 ಬಾಡಿಗೆ ಮನೆಗಳೂ ಇವೆ. 

ಲಾಕ್‍ಡೌನ್‍ನಿಂದ ಕೆಲಸ ಕಾರ್ಯವಿಲ್ಲದೆ ಬಾಡಿಗೆ ಮನೆಯಲ್ಲಿ ಇರುವವರ ಸಂಕಷ್ಟವನ್ನು ಅರ್ಥ ಮಾಡಿ ಬಾಡಿಗೆದಾರರ ತಿಂಗಳ ಬಾಡಿಗೆ ಮನ್ನಾ ಮಾಡುವುದೇ ಇಂದು ವಿಶೇಷ ಎನಿಸುತ್ತದೆ. ಆದರೆ ಮುಹಮ್ಮದ್ ಹಸನ್ ತನ್ನ ಕಟ್ಟಡದಲ್ಲಿರುವ ಮೆಡಿಕಲ್, ತರಕಾರಿ, ದಿನಸಿ ಸಾಮಗ್ರಿ, ಬೇಕರಿಗಳ ಕೂಡಾ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿರುವುದು ವಿಶೇಷದಲ್ಲಿ ವಿಶೇಷವಾಗಿದೆ. ಯಾಕೆಂದರೆ ಲಾಕ್‍ಡೌನ್ ಆಗಿದ್ದರೂ ಈ ಅಂಗಡಿಗಳನ್ನು ಮಧ್ಯಾಹ್ನದವರೆಗೆ ತೆರೆದು ವ್ಯಾಪಾರ ನಡೆಸಲು ಅವಕಾಶ ಇದೆ.

ಪಾಣೆಮಂಗಳೂರಿನಲ್ಲಿ ವಾಸವಿದ್ದ ಮುಹಮ್ಮದ್ ಹಸನ್ ಕುಟುಂಬ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರಸಕ್ತ ಬರಿಮಾರಿನಲ್ಲಿ ವಾಸವಿದೆ. ವಿದೇಶದಲ್ಲಿ ಉದ್ಯೋಗದಲ್ಲಿರುವ ಮುಹಮ್ಮದ್ ಹಸನ್ ಅವರು ರಜೆಯಲ್ಲಿ ಊರಿಗೆ ಬಂದಿದ್ದಾರೆ. ಪತ್ನಿ, ನಾಲ್ವರು ಮಕ್ಕಳೊಂದಿಗೆ ಸಂತೃಪ್ತ ಜೀವನ ನಡೆಸುವ ಮುಹಮ್ಮದ್ ಹಸನ್ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾದ ತನ್ನ ಬಾಡಿಗೆದಾರರ ಲಕ್ಷಾಂತರ ರೂ. ಬಾಡಿಗೆಯನ್ನು ಮನ್ನಾ ಮಾಡಿರುವುದು ಬಾಡಿಗೆ ಮನೆಗಳಿರುವ ಮಾಲಕರಿಗೆ ಮಾದರಿ ಎನಿಸಿದ್ದಾರೆ.

ಮನೆಗಳ ಇನ್ನೊಂದು ತಿಂಗಳ ಬಾಡಿಗೆ ಮನ್ನಾಗೆ ಚಿಂತನೆ 

ಎಪ್ರಿಲ್ 14ರ ವರೆಗೆ ಇದ್ದ ಲಾಕ್‍ಡೌನ್ ಮೇ 3ರ ವರೆಗೆ ಮುಂದುವರಿದಿದೆ. ಈಗಾಗಿ ಜನರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಗಳ ಮತ್ತೊಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಬಗ್ಗೆ ಚಿಂತಿಸಲಾಗಿದೆ. ಈ ಬಗ್ಗೆ ಅಂತಿಮ ನಿರ್ಧಾರ ಮಾಡಿಲ್ಲ. ಮುಂದಿನ ಪರಿಸ್ಥಿತಿ, ಲಾಕ್‍ಡೌನ್‍ನ ವಿಸ್ತರಣೆ, ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ನೋಡಿ ಈ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಬಿ.ಎಚ್.ಕಾಂಪ್ಲೆಕ್ಸ್ ಮಾಲಕ ಮುಹಮ್ಮದ್ ಹಸನ್ ಹೇಳಿದ್ದಾರೆ.

ಕೊರೋನ ವೈರಸ್ ಜಗತ್ತನ್ನೇ ನಡುಗಿಸಿದೆ. ಜನರು ಕೆಲಸ, ವ್ಯಾಪಾರ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮೂರು ಹೊತ್ತಿನ ಅನ್ನ ಬೇಯಿಸುವುದೇ ಕಷ್ಟವಾಗಿದೆ. ಹೀಗಾಗಿ ಬಡವರು, ಮಧ್ಯಮ ವರ್ಗದ ಜನರು ಬೇಜಾರಿನಲ್ಲಿ ಇದ್ದಾರೆ. ತನ್ನ ಕಟ್ಟಡದಲ್ಲಿರುವ 21 ಅಂಗಡಿಗಳು, 12 ಮನೆಗಳಲ್ಲಿ ಸರ್ವ ಧರ್ಮಗಳಿಗೆ ಸೇರಿದವರು ಬಾಡಿಗೆಗೆ ಇದ್ದಾರೆ. ಅವರ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದೇನೆ. 

- ಮುಹಮ್ಮದ್ ಹಸನ್, 
ಬಿ.ಎಚ್.ಕಾಂಪ್ಲೆಕ್ಸ್ ಮಾಲಕ 

ಅಂಗಡಿಯ ಬಾಡಿಗೆ ಮನ್ನಾ ಮಾಡುವ ಬಗ್ಗೆ ಮಾಲಕ ಹಸನ್ ಅವರು ನನಗೆ ಈವರೆಗೆ ಮಾಹಿತಿ ನೀಡಿಲ್ಲ. ಆದರೆ ಅವರು ಬಾಡಿಗೆ ಮನ್ನಾ ಮಾಡುವ ಗುಣವುಳ್ಳ ವ್ಯಕ್ತಿಯಾಗಿದ್ದಾರೆ. ಮಾಸಿಕ ಬಾಡಿಗೆ ನೀಡುವುದು ತಡವಾದರೂ ಅಂಗಡಿಗೆ ಬಂದು ಕೇಳಿದವರಲ್ಲ. ಮಾನವೀಯ ಗುಣವಿರುವ ಹಸನ್ ಅವರ ಈ ನಿರ್ಧಾರ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಎಲ್ಲಾ ಬಾಡಿಗೆದಾರರಿಗೆ ಅನುಕೂಲವಾಗಿದೆ. 
- ಹರೀಶ್, 
ಕಟ್ಟಡದಲ್ಲಿರುವ ಅಂಗಡಿಯೊಂದರ ಬಾಡಿಗೆದಾರ 

ಲಾಕ್‍ಡೌನ್‍ನಿಂದ ವ್ಯಾಪಾರ ಕಡಿಮೆ ಇದೆ. ಒಂದು ತಿಂಗಳ ಬಾಡಿಗೆ ಮನ್ನಾ ಮಾಡುವ ಮಾಲಕ ಹಸನ್ ಅವರ ನಿರ್ಧಾರ ಸಂತೋಷವಾಗಿದೆ. ಇದು ಒಳ್ಳೆಯ ಕೆಲಸ. ನಮಗೆ ಒಬ್ಬ ಉತ್ತಮ ಮಾಲಕ ಸಿಕ್ಕಿದ್ದಾರೆ. 
- ಪಿ. ಮೋಹನ್ ಶೆನೈ,
ಕಟ್ಟಡದಲ್ಲಿರುವ ದಿನಸಿ ಅಂಗಡಿ ಮಾಲಕ 

ನಮ್ಮ ಗಂಡಸರು ವಿದೇಶದಲ್ಲಿ ದುಡಿಯುತ್ತಿದ್ದಾರೆ. ವಿದೇಶದಲ್ಲೂ ಲಾಕ್‍ಡೌನ್‍ನಿಂದ ಅವರು ಕೆಲವಿಲ್ಲದೆ ರೂಂನಲ್ಲಿ ಬಾಕಿ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಬಾಡಿಗೆಯಲ್ಲಿ ಇರುವ ಮನೆ ಮಾಲಕ ಹಸನ್ ಅವರು ಎಪ್ರಿಲ್ ತಿಂಗಳ ಬಾಡಿಗೆ ಬೇಡ ಎಂದಿದ್ದಾರೆ. ಇದು ನಮಗೆ ತುಂಬಾ ಖುಷಿ ಆಗಿದೆ. 
- ಖತೀಜ, ಕಟ್ಟಡದಲ್ಲಿ ಬಾಡಿಗೆ ಮನೆಯಲ್ಲಿರುವವರು

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News