ರಮಝಾನ್‌ನಲ್ಲಿ ಎಲ್ಲಿಯೂ ಸಾಮೂಹಿಕ ತರಾವೀಹ್ ನಮಾಝ್ ಬೇಡ : ಖಾಝಿ ಬೇಕಲ ಉಸ್ತಾದ್
ಮಂಗಳೂರು, ಎ. 21: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ವಿಧಿಸಲ್ಪಟ್ಟ ಲಾಕ್‌ಡೌನ್‌ಗೆ ಅನುಗುಣವಾಗಿ ಈಗಾಗಲೆ ಮಸೀದಿಗಳಲ್ಲಿ ಸಾಮೂಹಿಕ ನಮಾಝ್‌ಗೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧವನ್ನು ಮೇ 3ರವರೆಗೆ ವಿಸ್ತರಿಸಿರುವ ಕಾರಣ ರಮಝಾನ್‌ನ ಸಾಮೂಹಿಕ ತರಾವೀಹ್‌ಗೂ ಇದು ಅನ್ವಯವಾಗಲಿದೆ. ಹಾಗಾಗಿ ಯಾರೂ ಕೂಡ ರಮಝಾನ್‌ನಲ್ಲಿ ಎಲ್ಲಿಯೂ ಸಾಮೂಹಿಕ ತರಾವೀಹ್ ನಮಾಝ್ ಮಾಡದೆ ಸರಕಾರದ ನಿಯಮಾವಳಿಯನ್ನು ಪಾಲಿಸಬೇಕಾಗಿದೆ ಎಂದು ಉಡುಪಿ ಸಂಯುಕ್ತ ಖಾಝಿ ಅಲ್‌ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್ ತಿಳಿಸಿದ್ದಾರೆ.
ಎ. 24 ಅಥವಾ 25ರಂದು ರಮಝಾನ್ ಉಪವಾಸ ಆರಂಭಗೊಳ್ಳಲಿದೆ. ಸಾಮಾನ್ಯವಾಗಿ ರಮಝಾನ್‌ನಲ್ಲಿ ತರಾವೀಹ್ ನಮಾಝ್‌ಗೆ ವಿಶೇಷ ಮಹತ್ವ ನೀಡಲಾಗುತ್ತಿದೆ. ಮಸೀದಿಗಳಲ್ಲಿ ಸಾಮೂಹಿಕವಾಗಿಯೇ ಇದನ್ನು ನಿರ್ವಹಿಸಲಾಗುತ್ತದೆ. ಆದರೆ ಈ ಬಾರಿ ಕೊರೋನ ವೈರಸ್ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ನಮಾಝ್ ಸಹಿತ ಎಲ್ಲಾ ಸಾಮೂಹಿಕ ಕಾರ್ಯಕ್ರಮಗಳಿಗೂ ನಿರ್ಬಂಧ ಹೇರಲಾಗಿದೆ. ಈ ಮಧ್ಯೆ ಕರ್ನಾಟಕ ಕರಾವಳಿ ತೀರದ ಅದರಲ್ಲೂ ಮಂಗಳೂರು ನಗರ ಸಹಿತ ಪ್ರಮುಖ ಜಂಕ್ಷನ್‌ಗಳ ಫ್ಲಾಟ್‌ಗಳಲ್ಲಿ ರಮಝಾನ್‌ನಲ್ಲಿ ಸಾಮೂಹಿಕ ತರಾವೀಹ್ ನಮಾಝ್ ನಿರ್ವಹಿಸುವ ಕೆಲವರು ಸಮಾಲೋಚಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸುರಕ್ಷಿತ ಅಂತರ ಕಾಪಾಡದೆ ಪರಸ್ಪರ ಬೆರೆಯುವುದರಿಂದ ಕೊರೋನ ವೈರಸ್ ರೋಗ ಹರಡುವ ಸಾಧ್ಯತೆ ನಿಚ್ಛಳವಾಗಿರುವುದರಿಂದ ನಾಲ್ಕೈದು ಮನೆಯವರು ಒಟ್ಟಾಗಿ ಒಂದು ಮನೆಯಲ್ಲಿ ಅಥವಾ ಫ್ಲಾಟ್‌ಗಳಲ್ಲಿ ಸಾಮೂಹಿಕ ತರಾವೀಹ್ ನಮಾಝ್ ಮಾಡಬಾರದು. ಬದಲಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಂಡೇ ನಮಾಝ್ ನಿರ್ವಹಿಸಬೇಕು ಎಂದು ಖಾಝಿ ಸೂಚಿಸಿದ್ದಾರೆ.
ಇದು ಯಾವುದೇ ಸಮುದಾಯದ ಅಥವಾ ಯಾರದೇ ಪ್ರಶ್ನೆಯಲ್ಲ. ಸಮಾಜದ ಸ್ವಾಸ್ಥದ ಪ್ರಶ್ನೆಯಾಗಿದೆ. ಇಲ್ಲಿ ಮಾನವನ ಪ್ರಾಣದ ರಕ್ಷಣೆ ಮುಖ್ಯವಾಗಿದೆಯೇ ವಿನಃ ಸಾಮೂಹಿಕವಾಗಿ ಧಾರ್ಮಿಕ ವಿಧಿವಿಧಾನ ನಡೆಸುವುದು ಮುಖ್ಯವಾಗಬಾರದು. ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಜೊತೆಯಾಗಿ ಬಾಳುವಾಗ ಸುರಕ್ಷಿತೆಯೂ ಮುಖ್ಯವಾಗಿದೆ. ಗುಂಪು ಸೇರುವುದರಿಂದ ಸೋಂಕು ಬೇಗ ಹರಡುವ ಸಾಧ್ಯತೆ ನಿಚ್ಛಳವಾಗಿದೆ. ಹಾಗಾಗಿ ಗುಂಪು ಸೇರಿ ಪ್ರಾರ್ಥಿಸದೆ ವೈಯಕ್ತಿಕವಾಗಿ ನಮಾಝ್ ಮತ್ತಿತರ ಧಾರ್ಮಿಕ ಕ್ರಿಯೆಗಳನ್ನು ನಡೆಸುವ ಮೂಲಕ ಮುಸ್ಲಿಮರು ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದು ಅವರು ತಿಳಿಸಿದ್ದಾರೆ.