ಲಾಕ್‌ಡೌನ್ ಸಂತ್ರಸ್ಥರಿಗೆ ಪುತ್ತಿಗೆ ಮಠದಿಂದ ಆಹಾರ ಸಾಮಗ್ರಿ
ಉಡುಪಿ, ಎ.21: ನೋವೆಲ್ ಕೊರೋನ ವೈರಸ್‌ಗಾಗಿ ಘೋಷಿಸಿರುವ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಮುಜರಾಯಿ ಇಲಾಖೆ ಸ್ಪಂಧಿಸಿದೆ. ಇಲಾಖೆಯ ವ್ಯಾಪ್ತಿಗೆ ಬರುವ ಉಡುಪಿಯ ಶ್ರೀಅನಂತೇಶ್ವರ ಹಾಗೂ ಶ್ರೀಚಂದ್ರಮೌಳೀಶ್ವರ ದೇವಸ್ಥಾನದ ವತಿಯಿಂದ ಇವರಿಗೆ ಸುಮಾರು ಐದು ಲಕ್ಷ ರೂ. ಮೌಲ್ಯದ ಆಹಾರ ಸಾಮಗ್ರಿಗಳನ್ನು ಇಂದು ವಿತರಿಸಲಾಯಿತು.
ಈ ಎರಡು ದೇವಸ್ಥಾನಗಳ ಆಡಳಿತ ಟ್ರಸ್ಟಿಯಾಗಿರುವ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಉಡುಪಿಯ ಪುತ್ತಿಗೆ ವಿದ್ಯಾಪೀಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಐದು ಲಕ್ಷ ರೂ.ಮೌಲ್ಯದ ಪಡಿತರದ ಕಿಟ್‌ಗಳನ್ನು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಸ್ತಾಂತರಿಸಿದರು.
ಜಿಲ್ಲೆಯ ವಲಸೆ ಕಾರ್ಮಿಕರಿಗೆ, ನಿರಾಶ್ರಿತರಿಗೆ ಹಾಗೂ ಕಾರ್ಮಿಕರಿಗೆ ವಿತರಿಸಲು ನೀಡಲಾದ ಈ ಕಿಟ್‌ಗಳನ್ನು ಪ್ರಸಾದವೆಂದು ಸ್ವೀಕರಿಸುವು ದಾಗಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಪ್ರಸಾದ ರೂಪದಲ್ಲಿ ಅನಂತೇಶ್ವರ ದೇವಸ್ಥಾನ ನೀಡಿದ ಯಾವುದೇ ವಸ್ತು ವ್ಯರ್ಥ ಮಾಡದೇ ಅತ್ಯಂತ ನಿರ್ಗತಿಕ ಕುಟುಂಬಕ್ಕೆ ವಿತರಿಸುವ ಭರವಸೆಯನ್ನು ಅವರು ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಉಪಸ್ಥಿತರಿದ್ದರು.