×
Ad

'ಉಡುಪಿ ನಗರಕ್ಕೆ ಮೇ ಅಂತ್ಯದವರೆಗೆ ನೀರು ಪೂರೈಕೆಗೆ ಕ್ರಮ'

Update: 2020-04-21 21:05 IST

ಉಡುಪಿ, ಎ.21: ಲಾಕ್‌ಡೌನ್ ಮಧ್ಯೆ ಉಡುಪಿ ನಗರದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ನಗರಸಭೆ ಕ್ರಮ ತೆಗೆದುಕೊಂಡಿದ್ದು, ಮೇ ಅಂತ್ಯದವರೆಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ಸ್ವರ್ಣ ನದಿಯ ವಿವಿಧ ಕಡೆಗಳಲ್ಲಿ ಶೇಖರಣೆಯಾಗಿರುವ ನೀರನ್ನು ಹಾಯಿಸುವ ಕಾರ್ಯ ನಿರಂತರವಾಗಿ ಮಾಡಲಾಗುತ್ತಿದೆ.

ಸ್ವರ್ಣ ನದಿಯ ಶಿರೂರು ಡ್ಯಾಮ್‌ನಿಂದ 2.5 ಕಿ.ಮೀ. ದೂರದಲ್ಲಿರುವ ಬೊಮ್ಮರಬೆಟ್ಟು ಗ್ರಾಮದ ಸಾಣೆಕಲ್ಲು ಗುಂಡಿಯಲ್ಲಿ ಶೇಖರಣೆಯಾಗಿರುವ ನೀರನ್ನು ಕಳೆದ 9-10 ದಿನಗಳಿಂದ ನಿರಂತರವಾಗಿ ಮೂರು ಪಂಪ್‌ಗಳಲ್ಲಿ ಹಾಯಿಸುವ ಕಾರ್ಯ ನಡೆಯುತ್ತಿದೆ.

ಈ ನೀರು ಶಿರೂರುನಿಂದ ಅರ್ಧ ಕಿ.ಮೀ. ದೂರದಲ್ಲಿರುವ ಕುಯ್ಲ್ಯಡಿ ಗುಂಡಿಯಲ್ಲಿ ಶೇಖರಣೆಯಾಗುತ್ತಿದೆ. ಅಲ್ಲಿಂದು ನೀರು ಶಿರೂರು ಡ್ಯಾಮ್‌ಗೆ ಹರಿದು ಹೋಗಿ ಶೇಖರಣೆಯಾಗುತ್ತಿದೆ. ಸಾಣೆಕಲ್ಲಿನಲ್ಲಿ ಇನ್ನು ಐದು ದಿನಗಳ ಕಾಲ ನೀರು ಹಾಯಿಸುವ ಕಾರ್ಯ ಮುಂದುವರೆಯಲಿದೆ ಎಂದು ನಗರಸಭೆ ಸಹಾಯಕ ಕಾರ್ಯಪಾಲ ಅಭಿಯಂತರ ಮೋಹನ್‌ರಾಜ್ ತಿಳಿಸಿದ್ದಾರೆ.

ನೀರಿನ ಸಂಗ್ರಹ ಹೆಚ್ಚಳ: ನಗರಕ್ಕೆ ನೀರು ಪೂರೈಕೆ ಮಾಡುವ ಹಿರಿಯಡ್ಕ ಸಮೀಪದ ಬಜೆ ಡ್ಯಾಂನಲ್ಲಿ ಇಂದಿನ ವರದಿ ಪ್ರಕಾರ 3.98 ಮೀಟರ್ ನೀರಿನ ಸಂಗ್ರಹ ಇದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ನೀರಿನ ಸಂಗ್ರಹ 1.35 ಮೀಟರ್ ಹೆಚ್ಚಿದೆ. ಇದರಲ್ಲಿ 1.5 ಮೀಟರ್ ಹೊರತು ಪಡಿಸಿದರೆ ಉಳಿದ 2.50 ಮೀಟರ್ ನೀರಿನಲ್ಲಿ ಪ್ರತಿದಿನಕ್ಕೆ 8 ಸೆ.ಮೀಟರ್‌ನಂತೆ 27-28 ದಿನಗಳಿಗೆ ಬೇಕಾಗುವಷ್ಟು ನೀರು ಸರಬರಾಜು ಮಾಡಬಹುದಾಗಿದೆ. ಅದರಂತೆ ಈ ನೀರು ಮೇ 18ರ ವರೆಗೆ ಸಾಕಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಸಾಣೆಕಲ್ಲುವಿನಲ್ಲಿ ಪಂಪಿಂಗ್ ಮುಗಿದ ಬಳಿಕ ಮರ್ಣೆ ಹಾಗೂ ಭಂಡಾರಿ ಬೆಟ್ಟುವಿನಲ್ಲಿರುವ ಹೊಂಡದಿಂದ ಪಂಪ್ ಆಳವಡಿಸಿ ನೀರು ಹಾಯಿಸುವ ಕಾರ್ಯ ಮಾಡಲಾಗುತ್ತದೆ. ಇಲ್ಲಿ ಸುಮಾರು 10 ದಿನಗಳಿಗೆ ಬೇಕಾಗುವಷ್ಟು ನೀರಿನ ಸಂಗ್ರಹ ಇದೆ. ಹಾಗಾಗಿ ಮೇ ಅಂತ್ಯದವರೆಗೆ ಉಡುಪಿ ನಗರಕ್ಕೆ ನಿರಂತರ ನೀರು ಪೂರೈಕೆ ಮಾಡಬಹುದಾಗಿದೆ ಎಂದು ಮೋಹನ್‌ರಾಜ್ ತಿಳಿಸಿದ್ದಾರೆ.

ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ಸ್ಥಳಕ್ಕೆ ಭೇಟಿ ನೀಡಿ ಕಳೆದ ಕೆಲವು ದಿನಗಳಿಂದ ನಿರಂತರ ನಡೆಯುತ್ತಿರುವ ಪಂಪಿಂಗ್ ಕಾರ್ಯವನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಗರಸಭೆ ಸಹಾಯಕ ಕಾರ್ಯ ಪಾಲ ಅಭಿಯಂತರ ಮೋಹನ್‌ರಾಜ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಳೆದ ಬಾರಿಗಿಂತ ಈ ಬಾರಿ 1.35 ಮೀಟರ್ ನೀರಿನ ಸಂಗ್ರಹ ಹೆಚ್ಚಿದೆ. ಕಳೆದ ಬಾರಿ ಪಂಪಿಂಗ್ ಕಾರ್ಯ ಮತ್ತು ನೀರಿನ ಪಡಿತರ ವ್ಯವಸ್ಥೆಯನ್ನು ವಿಳಂಬವಾಗಿ ಮಾಡಲಾಗಿತ್ತು. ಹೀಗಾಗಿ ಸಾಕಷ್ಟು ನೀರಿನ ಕೊರತೆ ಉದ್ಭವ ವಾಗಿತ್ತು. ಆದರೆ ಈ ಬಾರಿ ಎಲ್ಲವೂ ಆರಂಭದಲ್ಲೇ ಮಾಡಲಾಗಿದೆ. ನೀರಿನ ಸೋರಿಕೆಯನ್ನು ಸಂಪೂರ್ಣವಾಗಿ ತಡೆಯಲಾಗಿದೆ. ಆದುದರಿಂದ ಮೇ ಅಂತ್ಯದವರೆಗೆ ನಿರಂತರವಾಗಿ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳ ಲಾಗಿದೆ.
-ಮೋಹನ್‌ರಾಜ್, ಸಹಾಯಕ ಕಾರ್ಯಪಾಲ ಅಭಿಯಂತರರು, ನಗರಸಭೆ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News