ಕೊರೋನ ವೈರಸ್ : ದ.ಕ. ಜಿಲ್ಲಾಡಳಿತದ ನಿರ್ದೇಶನಗಳನ್ನು ಪಾಲಿಸಲು ಬಿಸಿಸಿಐ ಕರೆ
ಮಂಗಳೂರು, ಎ.21: ಜಗತ್ತಿನಾದ್ಯಂತ ಜನಸಾಮಾನ್ಯರ ಬದುಕನ್ನು ಕಸಿದ ಕೊರೋನ ವೈರಸ್ ವಿರುದ್ಧ ಕೇಂದ್ರ, ರಾಜ್ಯ ಸರಕಾರ ಅಥವಾ ಜಿಲ್ಲಾಡಳಿತ ನೀಡುವ ನಿರ್ದೇಶನಗಳು ಮತ್ತು ನಿರ್ಬಂಧಗಳನ್ನು ಕಟ್ಟ್ಟುನಿಟ್ಟಾಗಿ ಪಾಲಿಸಲು ಬಿಸಿಸಿಐ (ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ) ಅಧ್ಯಕ್ಷ ಎಸ್‌ಎಂ ರಶೀದ್ ಹಾಜಿ ಕರೆ ನೀಡಿದ್ದಾರೆ.
ಆರೋಗ್ಯ ಸೂಕ್ಷ್ಮ ಮತ್ತು ಸಮಾಜದ ಹಿತದೃಷ್ಟಿಯಿಂದ ಆಡಳಿತ ವರ್ಗವು ಕಾಲ ಕಾಲಕ್ಕೆ ನೀಡುವ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು ಅನಿವಾರ್ಯವಾಗಿದೆ. ಕರೋನಕ್ಕೆ ಸಂಬಂಧಿಸಿದಂತೆ ವಿದೇಶಗಳಿಗೆ ಹೋಲಿಸಿದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೆತ್ತಿಕೊಂಡ ಕ್ರಮಗಳು ಶ್ಲಾಘನೀಯವಾಗಿದೆ. ಇದಕ್ಕೆ ಪೂರಕವಾಗಿ ಸಮುದಾಯ ಕೂಡ ಸ್ಪಂದಿಸಬೇಕಿದೆ. ಯಾವ ಕಾರಣಕ್ಕೂ ಕಾನೂನು ಉಲ್ಲಂಘಿಸಬಾರದು. ವಿದೇಶದಿಂದ ಯಾರೇ ಬಂದಿದ್ದರೂ ಕೂಡ ಸ್ವಯಂಪ್ರೇರಿತರಾಗಿ ಆರೋಗ್ಯ ಕೇಂದ್ರ ಅಥವಾ ನಿಯುಕ್ತಿಗೊಳಿಸಲಾದ ಸರಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿದೆ. ಅಲ್ಲದೆ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕಂಡು ಬಂದಲ್ಲಿ ತಕ್ಷಣ ತಪಾಸಣೆ ಗೊಳಗಾಗಬೇಕಿದೆ. ಈ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಯುವ ಸಂಘಟನೆಗಳು ಮುಂದಾಗಬೇಕಿದೆ ಎಂದು ಎಸ್‌ಎಂ ರಶೀದ್ ಹಾಜಿ ತಿಳಿಸಿದ್ದಾರೆ.