ಶ್ರೀಲಂಕಾ: ಈಸ್ಟರ್ ದಾಳಿ ಸಂತ್ರಸ್ತರಿಗೆ ಶ್ರದ್ಧಾಂಜಲಿ

Update: 2020-04-21 16:54 GMT

ಕೊಲಂಬೊ (ಶ್ರೀಲಂಕಾ), ಎ. 21: ಕಳೆದ ವರ್ಷದ ಈಸ್ಟರ್ ರವಿವಾರದಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರೀಲಂಕಾ ಮಂಗಳವಾರ ಎರಡು ನಿಮಿಷಗಳ ಮೌನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತು.

ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶವ್ಯಾಪಿ ಬೀಗಮುದ್ರೆ ಜಾರಿಯಲ್ಲಿ ಇರುವ ಕಾರಣದಿಂದ ರೋಮನ್ ಕೆಥೋಲಿಕ್ ಆಡಳಿತವು ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಿಂದ ಹಿಂದೆ ಸರಿದಿದೆ. ಬದಲಿಗೆ, ದೇಶಾದ್ಯಂತವಿರುವ ಚರ್ಚ್‌ಗಳಲ್ಲಿ ಐದು ನಿಮಿಷಗಳ ಕಾಲ ಗಂಟೆಗಳನ್ನು ಮೊಳಗಿಸಲಾಯಿತು.

ಕಳೆದ ವರ್ಷದ ಎಪ್ರಿಲ್ 21ರಂದು ಹೊಟೇಲ್‌ಗಳು ಮತ್ತು ಚರ್ಚ್‌ಗಳ ಮೇಲೆ ನಡೆದ ಭಯೋತ್ಪಾದಕ ದಾಳಿಗಳಲ್ಲಿ 279 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 600 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 45 ಮಂದಿ ವಿದೇಶೀಯರು.

ಗಂಟೆಗಳು ಮೊಳಗಿದ ಬೆನ್ನಿಗೇ, ಬೆಳಗ್ಗೆ 8:45ರಿಂದ ಎರಡು ನಿಮಿಷಗಳ ಕಾಲ ವೌನಾಚರಣೆ ಮಾಡಲಾಯಿತು. ಕಳೆದ ವರ್ಷ ಇದೇ ಸಮಯದಲ್ಲಿ ಬಾಂಬ್‌ಗಳು ಸ್ಫೋಟಗೊಂಡಿದ್ದವು. ಈ ಅವಧಿಯಲ್ಲಿ ಟೆಲಿವಿಶನ್ ಚಾನೆಲ್‌ಗಳೂ ಮೌನವಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News