ಅಮೆರಿಕ: 42,000 ದಾಟಿದ ಕೊರೋನ ಸಾವಿನ ಸಂಖ್ಯೆ; ಒಂದೇ ದಿನದಲ್ಲಿ 1,433 ಬಲಿ
Update: 2020-04-21 22:29 IST
ವಾಶಿಂಗ್ಟನ್, ಎ. 21: ಅಮೆರಿಕದಲ್ಲಿ ಕಳೆದ 24 ತಾಸುಗಳಲ್ಲಿ 1,433 ಮಂದಿ ಕೊರೋನವೈರಸ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಆ ದೇಶದಲ್ಲಿ ಈ ಸಾಂಕ್ರಾಮಿಕ ಮಹಾಮಾರಿಗೆ ಬಲಿಯಾದವರ ಸಂಖ್ಯೆ 42,094ಕ್ಕೆ ಏರಿದೆ.
ಕೊರೋನಕ್ಕೆ ಬಲಿಯಾದವರ ಸಂಖ್ಯೆಯಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ.
ಅಮೆರಿಕದಲ್ಲಿ ಕೋವಿಡ್-19 ಸೋಂಕಿಗೆ ಒಳಗಾದವರ ಸಂಖ್ಯೆ ಈಗ 7,84,000ವನ್ನು ದಾಟಿದೆ ಎಂದು ಬಾಲ್ಟಿಮೋರ್‌ನಲ್ಲಿರುವ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿಅಂಶಗಳು ತಿಳಿಸಿವೆ.
ನ್ಯೂಯಾರ್ಕ್ ಅಮೆರಿಕದ ಕೊರೋನವೈರಸ್ ಕೇಂದ್ರಬಿಂದುವಾಗಿದೆ. ಅಲ್ಲಿ ಸೋಮವಾರ 478 ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಮೂರು ದಿನಗಳಿಂದ ಮೃತರ ಸಂಖ್ಯೆಯಲ್ಲಿ ಇಳಿಕೆ ದಾಖಲಾಗಿದೆ.