×
Ad

ಭಟ್ಕಳ: ಮಸೀದಿಯಲ್ಲಿ ನಮಾಝ್ ಮಾಡುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಕ್ವಾರೆಂಟೈನ್ ಸೀಲು

Update: 2020-04-21 22:55 IST

ಭಟ್ಕಳ : ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಆರೋಪದಡಿ ಮಸೀದಿಯಲ್ಲಿ ನಮಾಝ್ ನಿರ್ವಹಿಸುತ್ತಿದ್ದ ಮೂರು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ಅವರ ಕೈಗೆ 14 ದಿನಗಳ ಕ್ವಾರೆಂಟೈನ್ ಸೀಲು ಹಾಕಿದ ಘಟನೆ ಸೋಮವಾರ ಸಂಜೆ ಹೆಬಳೆ ಗ್ರಾ.ಪಂ ವ್ಯಾಪ್ತಿಯ ತೆಂಗಿನಗುಂಡಿ ಅಥರ್ ಮೊಹಲ್ಲಾದಲ್ಲಿ  ನಡೆದಿದೆ.

ಘಟನೆಗೆ ಸಂಬಂಧಿಸಿದ ಸಾರ್ವಜನಿಕರಿಂದ ವ್ಯಾಪಕ ವಿರೋಧ ಉಂಟಾಗಿದ್ದು ಭಟ್ಕಳದಲ್ಲಿ ಪೊಲೀಸರು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ತೆಂಗಿನಗುಂಡಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಕ್ಬಾಲ್ ಬಂಗಾಲಿ ಮಾಹಿತಿ ನೀಡಿದ್ದು ನಾವು ಲಾಕ್‍ಡೌನ್ ನಿಯಮ ಎಲ್ಲೂ ಉಲ್ಲಂಘಿಸಿಲ್ಲ. ತಂಝಿಮ್ ಹಾಗೂ ವಕ್ಫ್ ಬೋರ್ಡ್ ನಿರ್ದೇಶನದಂತೆ ಪಾಲನೆ ಮಾಡುತ್ತಿದ್ದು ಕೇವಲ ಮೂರು ಮಂದಿ ಮಾತ್ರ ನಮಾಝ್ ನಿರ್ವಹಿಸುತ್ತಿದ್ದಾರೆ. ಮಸೀದಿಯಲ್ಲಿ ಮೂವರಿಗಿಂತ ಒಬ್ಬ ವ್ಯಕ್ತಿಯು ಹೋಗಲು ಅನುಮತಿ ಇಲ್ಲ. ಹಾಗಾಗಿ ಪೊಲೀಸರು ಲಾಕ್‍ಡೌನ್ ನಿಯಮ ಉಲ್ಲಂಘನೆ  ನೆಪವೊಡ್ಡಿ ವಿನಾಕಾರಣ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಈ ಕುರಿತಂತೆ ಸ್ಥಳಿಯ ಆನ್‍ಲೈನ್ ಜಾಲತಾಣವೊಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ರನ್ನು ದೂರವಾಣಿ ಮೂಲಕ ಸಂರ್ಪಕಿಸಿದ್ದು, ಸಾರ್ವಜನಿಕರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಮಸೀದಿಯಲ್ಲಿ ನೇಮಕವಾಗಿರುವ ಇಮಾಮ್ ಹಾಗೂ ಇರತ ಇಬ್ಬರನ್ನು ಹೊರತುಪಡಿಸಿ ಬೇರೆಯವರಿಗೆ ಮಸೀದಿಯಲ್ಲಿ ನಮಾಜ್ ನಿರ್ವಹಿಸಲು ಅವಕಾಶವಿಲ್ಲ. ಸೋಮವಾರ ಭಟ್ಕಳದಲ್ಲಿ ಪೊಲೀಸರು ವಶಪಡಿಸಿಕೊಂಡಿರು ವ್ಯಕ್ತಿಗಳು ಮಸೀದಿಯಲ್ಲಿ ನೇಮಕಗೊಂಡ ಇಮಾಮರು ಆಗಿರಲಿಲ್ಲದ ಕಾರಣ ಅವರನ್ನು ವಶಪಡಿಸಿಕೊಂಡು ಎಚ್ಚರಿಕೆಯನ್ನು ನೀಡಿ ಸೋಮವಾರವೇ  ಮನೆಗೆ ಕಳುಹಿಸಿದ್ದಾರೆ. ಭಟ್ಕಳದಲ್ಲಿ ಆದಷ್ಟು ಮಟ್ಟಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಿದ್ದೇವೆ ಎಂದು ಸ್ಪಷ್ಟೀಕರಿಸಿದ್ದಾರೆ.

ಭಟ್ಕಳದ ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ನೇಮಕಗೊಂಡಿರುವ ಇಮಾಮರು ಅದೇ ಪ್ರದೇಶದಲ್ಲಿರದೆ ಬೇರೆಬೇರೆ ಪ್ರದೇಶಗಳಲ್ಲಿ ವಾಸಿಸುವದರಿಂದಾಗಿ ಆಯಾ ಪ್ರದೇಶ, ಮೋಹಲ್ಲಾದ ನಿವಾಸಿಗಳೇ ಮಸೀದಿಯಲ್ಲಿ ನಮಾಜ್ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು ಸೋಮವಾರದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದಾಗಿ ಪೊಲೀಸರ ವಿರುದ್ಧ ಸಾರ್ವಜನಿಕರ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ ಎನ್ನಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News