×
Ad

ಕೊರೋನ ಭೀತಿಯ ನಡುವೆಯೂ ಕಾಸರಗೋಡು ವೈದ್ಯರಿಗೆ ಜೀವರಕ್ಷಣೆಗಾಗಿ ರಕ್ತದಾನ ಮಾಡಿದ ಹಾಶೀರ್ ಪೇರಿಮಾರ್

Update: 2020-04-21 23:00 IST

ಮಂಗಳೂರು, ಎ.21: ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ಅಸೌಖ್ಯಕ್ಕೆ ತುತ್ತಾದ ಕಾಸರಗೋಡಿನ ವೈದ್ಯರಿಗೆ ಬೇಕಾದ ಅಗತ್ಯ ರಕ್ತವನ್ನು ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ರಕ್ತದಾನ ಮಾಡುವ ಮೂಲಕ ಜಿಲ್ಲೆಯ ಜನರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಕಾಸರಗೋಡಿನ ಕಾರ್ ವೆಲ್ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ನ ಖ್ಯಾತ  ವೈದ್ಯರಾಗಿರುವ  ಡಾ. ಅಬ್ದುಲ್ ಹಮೀದ್ ಅವರು ಅನಾರೋಗ್ಯಕ್ಕೆ ತುತ್ತಾದ ಹಿನ್ನಲೆಯಲ್ಲಿ ಅವರಿಗೆ ತುರ್ತು ಸಿಂಗಲ್ ಡೋ‌ನರ್ ಪ್ಲೇಟ್ ಲೆಟ್ ರಕ್ತದ ಅವಶ್ಯಕತೆ ಇತ್ತು. ಈ ಸೇವೆಯು  ಕಾಸರಗೋಡಿನಲ್ಲಿ ಸಿಗದ ಕಾರಣ ಮಂಗಳೂರಿನ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇವರು ಪುದು ಗ್ರಾಮ ಪಂಚಾಯತ್ ಸದಸ್ಯ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್ ಅವರನ್ನು ಸಂಪರ್ಕಿಸಿದರು.  ಈ ವೇಳೆ ನಾನೇ ಖುದ್ದಾಗಿ ಆಸ್ಪತ್ರೆಗೆ ಬಂದು ನೀಡುವುದಾಗಿ ತಿಳಿಸಿದ  ಹಾಶೀರ್ ಪೇರಿಮಾರ್ ಅವರ ಸೇವೆ ಸಮಾಜಕ್ಕೆ ಮಾದರಿಯಾಯಿತು. 

ಈ ತುರ್ತು ರಕ್ತದಾನ ಸೇವೆಗೆ ಎರಡು ಗಂಟೆ ಸಮಯ ಅವಕಾಶವಿದ್ದು‌ ಈ ರಕ್ತದಾನ ಸೇವೆಯನ್ನು ಕೆಎಂಸಿಯಲ್ಲಿ ನಿರ್ವಹಿಸಲಾಯಿತು.

ರುದಿರ ಸೇನಾ ಕಾಸರಗೋಡು ಇದರ ಉಪಾಧ್ಯಕ್ಷ ಸುದೇಶ್ ಪಿ ಮತ್ತು ಕಾರ್ಯದರ್ಶಿ ಸಜಿನಿ ಸೆಗಾಶೇರಿ ಇವರು ರಕ್ತದ ಸ್ಯಾಂಪಲ್ ಅನ್ನು ಕಾಸರಗೋಡಿನಿಂದ ತಲಪಾಡಿ ಗಡಿಯವರೆಗೆ ವೈದ್ಯರ ಧೃಡೀಕರಣ ಪತ್ರದೊಂದಿಗೆ ಆಂಬ್ಯುಲೆನ್ಸ್ ಮುಖಾಂತರ  ತಂದು  ಅದನ್ನು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಸದಸ್ಯರಿಗೆ  ನೀಡಿದರು. ಅವರು ಅದನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ತಲುಪಿಸಿದರು. ಯುವ ಕಾಂಗ್ರೆಸ್ ಮುಂಖಡ ಹಾಶೀರ್ ಪೇರಿಮಾರ್ ದಾನ ಮಾಡಿದ O+ ರಕ್ತವು ಸೋಮವಾರ ಬೆಳಗ್ಗೆ ಪರಿವರ್ತಿಸಿದ ತುರ್ತು ಸಿಂಗಲ್ ಡೋ‌ನರ್ ಪ್ಲೇಟ್ ಲೆಟ್ ರಕ್ತವನ್ನು ಕಾಸರಗೋಡಿಗೆ ತಲುಪಿಸಲಾಗುವುದು ಎಂದು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಗೌರವಾಧ್ಯಕ್ಷ ನಝೀರ್ ಹುಸೈನ್ ತಿಳಿಸಿದ್ದಾರೆ. 

ಇದೇ ವೇಳೆ ಮಂಗಳೂರು ಯುವ ಕಾಂಗ್ರೆಸ್ ಕಾರ್ಯದರ್ಶಿ ಶೌಕತ್ ಅಲಿ ಮಾರಿಪಳ್ಳ, MSF ಜಿಲ್ಲಾಧ್ಯಕ್ಷ ಇಶ್ರಾರ್ ಗೂಡಿನಬಳಿ, ಜಾಬೀರ್ ಪೇರಿಮಾರ್ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಈ ಸಂದರ್ಭ  ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಖಜಾಂಜಿ ಮತ್ತು ರಕ್ತ ನಿರ್ವಾಹಕ  ಸಫ್ವಾನ್ ಕಲಾಯಿ, ಶಿಬಿರ ನಿರ್ವಾಹಕ ಮುಸ್ತಫ ಕೆ.ಸಿ.ರೋಡ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News