ಬಡ, ಮಧ್ಯಮ ವರ್ಗದ ಜನರಿಗೆ ಸರಕಾರ ನೆರವಾಗಲಿ: ಹಾರೂನ್ ರಶೀದ್
ಬಂಟ್ವಾಳ, ಎ.21: ಬಾಡಿಗೆ ಮನೆ ಹಾಗೂ ಅಂಗಡಿಗಳಲ್ಲಿ ವ್ಯಾಪಾರ ಮಾಡುವ ಬಡ ಮತ್ತು ಮಧ್ಯಮ ವರ್ಗದ ಜನರ ಮೂರು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಕಾನೂನನ್ನು ಕೂಡಲೇ ಜಾರಿಗೆ ತರಬೇಕು ಎಂದು ಜೆಡಿಎಸ್ ಮುಖಂಡ ಹಾರೂನ್ ರಶೀದ್ ಬಂಟ್ವಾಳ ಅವರು ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಕೋವಿಡ್ - 19 (ಕೊರೋನ) ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇವರಿಗೆ ನೆರವು ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಸಂಘ - ಸಂಸ್ಥೆಗಳು ಸಾಧ್ಯವಾದಷ್ಟು ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸಿದೆ. ಆದರೆ ಗ್ರಾಮೀಣ ಪ್ರದೇಶಗಳ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತುತ್ತು ಅನ್ನಕ್ಕಾಗಿ ಆಹಾಕಾರ ಅನುಭವಿಸುತ್ತಿರುವೆ. ಬಿಪಿಎಲ್ ಪಡಿತರ ಚೀಟಿದಾರರಿಗೆ ಸಾಮಾನ್ಯವಾಗಿ ತಿಂಗಳಿಗೆ ಸಿಗುವ ಪಡಿತರ ಹೊರತು ಪಡಿಸಿ ಬೇರೆ ಯಾವುದೇ ನೆರವು ಸಿಕ್ಕಿಲ್ಲ. ಪಡಿತರದಲ್ಲೂ ತಲಾ ತಿಂಗಳಿಗೆ ಎರಡು ಕೆ.ಜಿ. ಅಂತೆ ಎರಡು ತಿಂಗಳ ನಾಲ್ಕು ಕೆ.ಜಿ. ಅಕ್ಕಿಯನ್ನು ಕಡಿತಗೊಳಿಸಲಾಗಿದೆ. ಇದು ಬಡವರಿಗೆ ಮಾಡಿರುವ ಅನ್ಯಾಯ ಎಂದು ಅವರು ಹೇಳಿದ್ದಾರೆ.
ಬಡವರಿಗೆ ನೆರವಾಗುವಂತೆ ಬಂಟ್ವಾಳ ಪುರಸಭೆ, ತಾಲೂಕು ಕಚೇರಿ, ಶಾಸಕರು, ಸಂಸದರನ್ನು ಸಂಪರ್ಕಿಸಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು. ಅಲ್ಲದೆ ಬಡ ಮತ್ತು ಮಧ್ಯಮ ವರ್ಗದ ಜನರು ಬಾಡಿಗೆ ಮನೆ ವಾಸಿಸುತ್ತಿದ್ದರೆ ಮತ್ತು ಬಾಡಿಗೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಅವರ ಮೂರು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಕಾನೂನು ಸರಕಾರ ಕೂಡಲೇ ರೂಪಿಸಬೇಕು ಎಂದು ಹಾರೂನ್ ರಶೀದ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.