ಮುಂಬೈ ಕನ್ನಡಿಗ, ಯಕ್ಷಗಾನ ಸಂಘಟಕ ಎಚ್.ಬಿ.ಎಲ್ ರಾವ್ ನಿಧನ
ಮುಂಬೈ, ಎ.22: ಕನ್ನಡ ಭಾಷೆ, ಸಾಹಿತ್ಯ, ಕರಾವಳಿಯ ಯಕ್ಷಗಾನವನ್ನು ಮುಂಬೈ ಮಹಾನಗರದಲ್ಲಿ ಬೆಳಗಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಹಿರಿಯ ಮುಂಬೈ ಕನ್ನಡಿಗ, ಸಂಘಟಕ, ಸಾಹಿತ್ಯ ಪ್ರಸಾರಕ ಎಚ್.ಬಿ.ಎಲ್. ರಾವ್ (87) ಅವರು ಬುಧವಾರ ಮುಂಜಾನೆ ಮುಂಬೈ ಉಪನಗರದ ನವಿಮುಂಬೈ ವಾಶಿ ನೆರೂಳ್‌ನ ಎಂಜಿಎಂ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಎಚ್‌ಬಿಎಲ್ ರಾವ್ ಎಂದೇ ಕನ್ನಡಿಗರಿಗೆ ಹಾಗೂ ಮುಂಬೈಯ ಅನ್ಯಭಾಷಿಗರಿಗೆ ಚಿರಪರಿಚಿತರಾದ ಹೆಜಮಾಡಿ ಬಾಗಿಲ್ತಾಯ ಲಕ್ಷ್ಮೀ ನಾರಾಯಣ ರಾವ್ ಕನ್ನಡ ಸಾಹಿತ್ಯ ಪರಿಷತ್‌ನ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ, ಮುಂಬೈ ಪದವೀಧರ ಯಕ್ಷಗಾನ ಮಂಡಳಿ ಸ್ಥಾಪಿಸಿ ಆ ಮೂಲಕ ಕರಾವಳಿ ಕಲೆಯ ಸಂವರ್ಧನೆ, ಪ್ರಸಾರ ಹಾಗೂ ಪ್ರದರ್ಶನಕ್ಕೆ ಅವಿರತವಾಗಿ ಶ್ರಮಿಸಿದ್ದರು.
ಹೆಜಮಾಡಿಯಲ್ಲಿ ಎಸೆಸೆಲ್ಸಿ ಮುಗಿಸಿ, ಭವಿಷ್ಯವನ್ನು ಅರಸಿ ಮೊದಲು ಚೆನ್ನೈ, ನಂತರ ಕಲ್ಲಿಕೋಟೆ ಕೊನೆಗೆ 1957 ಮುಂಬೈಗೆ ತೆರಳಿದ ರಾವ್, ಅಲ್ಲಿ ದುಡಿಯುತ್ತಾ ಬಿ.ಎ. ಹಾಗೂ ಮುಂಬೈ ವಿವಿಯಿಂದ ಕಾನೂನು ಪದವಿ ಪಡೆದರು. ಮುಂಬೈಯ ಬಿಲ್ಲವರ ಅಸೋಸಿಯೇಷನ್, ಮೊಗವೀರ ಸಂಘ ಹಾಗೂ ಬಂಟರ ಸಂಘದ ರಾತ್ರಿ ಶಾಲೆಗಳಲ್ಲಿ ಅವರು ಶಿಕ್ಷಕರಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಕರಾವಳಿಯ ಯಕ್ಷಗಾನ ಕಲೆಯನ್ನು ಅಪಾರವಾಗಿ ಪ್ರೀತಿಸುತಿದ್ದ ಇವರು 1973ರಲ್ಲಿ ಪದವೀಧರ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದು ನಿರಂತರ ಯಕ್ಷಗಾನ ಸಂಬಂಧಿ ಚಟುವಟಿಕೆಗಳಲ್ಲಿ ನಿರತರಾಗಿ ದ್ದರಲ್ಲದೇ, ಯಕ್ಷಗಾನ ಪ್ರದರ್ಶನ, ಕಲಿಕೆ, ಸಮ್ಮೇಳನನ್ನು ನಡೆಸಿಕೊಂಡು ಬಂದಿದ್ದರು. ಯಕ್ಷಗಾನವನ್ನು ದೇಶವಿದೇಶಗಳಲ್ಲಿ ಜನಪ್ರಿಯಗೊಳಿಸಲು ಶ್ರಮಿಸಿದ್ದರು. 140ಕ್ಕೂ ಅಧಿಕ ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ಅವರು ಪ್ರಕಟಿಸಿದ್ದಾರೆ. ಹತ್ತಾರು ಯಕ್ಷಗಾನ ಸಮ್ಮೇಳನಗಳನ್ನು ನಡೆಸಿ ಅದರ ನೆನಪಿನ ಸಂಪುಟ ತಂದಿದ್ದಾರೆ.
ಕನ್ನಡ, ತುಳು ಸಾಹಿತ್ಯ, ಯಕ್ಷಗಾನ, ಗಮಕ ಸಾಹಿತ್ಯ, ಸಾಮಾಜಿಕ, ಧಾರ್ಮಿಕ ಆಧ್ಯಾತ್ಮ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಪ್ರಕಾಶಕರಾಗಿ ಹಲವು 20ಕ್ಕೂ ಅಧಿಕ ಗ್ರಂಥ, ಕೃತಿಗಳನ್ನು ಪ್ರಕಟಿಸಿದ್ದಾರೆ. ಮಹಾರಾಷ್ಟ್ರದಾದ್ಯಂತ ಯಕ್ಷಗಾನ, ತುಳು, ಕನ್ನಡ ಸಾಹಿತ್ಯ ಸಮ್ಮೇಳನ, ತುಳು ಪರ್ಬ, ಹರಿದಾಸ ಸಾಹಿತ್ಯ ಸಮ್ಮೇಳನ, ಗಮಕ ಕಲಾ ಸಮ್ಮೇಳನ, ಅನುಭವ ಸಾಹಿತ್ಯ ಸಮಾವೇಶ, ಸಾಂಸ್ಕೃತಿಕ ಸಮಾವೇಶಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದರು.
ಎಚ್‌ಬಿಎಲ್ ರಾವ್ ಇವರಿಗೆ 2014ರಲ್ಲಿ ಅವರ ಶಿಷ್ಯರು ಮತ್ತು ಅಭಿಮಾನಿಗಳು ‘ಹರಸಾಹಸ’ ಅಭಿಂದನಾ ಗ್ರಂಥವನ್ನು ಅರ್ಪಿಸಿದ್ದರು. ‘ಕಲಾತಪಸ್ವಿ’ ಇವರ ಸಾಧನೆಗಳು ಹಾಗೂ ವ್ಯಕ್ತಿತ್ವವನ್ನು ತೆರೆದಿಡುವ ಇನ್ನೊಂದು ಕೃತಿ. ಇವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ಶ್ರೀ, ಯಕ್ಷಗಾನ ಕಲಾ ಪ್ರಶಸ್ತಿ, ತುಳುಶ್ರೀ ಪ್ರಶಸ್ತಿ, ಮುಂಬೈ ವಿವಿ ಗೌರವ ಪುರಸ್ಕಾರ, ಸಮಾಜ ರತ್ನ ಪ್ರಶಸ್ತಿಗಳು ಇವರಿಗೆ ಸಂದಿವೆ. 2019ರಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ಪ್ರತಿಷ್ಠಿತ ‘ಶ್ರೀವಿಶ್ವೇಶತೀರ್ಥ ಪ್ರಶಸ್ತಿ’ಗೂ ಇವರು ಬಾಜನರಾಗಿದ್ದರು.